ADVERTISEMENT

ಭಿಕ್ಷುಕರ ಕರವೂ ದುರ್ಬಳಕೆ

ನೂರಾರು ಕೋಟಿ ಅನ್ಯ ಉದ್ದೇಶಕ್ಕೆ ಬಳಕೆ: ಸಿಎಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 18:57 IST
Last Updated 29 ಅಕ್ಟೋಬರ್ 2019, 18:57 IST

ಬೆಂಗಳೂರು: ಭಿಕ್ಷುಕರನ್ನು ಉದ್ಧಾರ ಮಾಡುತ್ತೇವೆ, ಹಳ್ಳಿಗರನ್ನು ಜ್ಞಾನವಂತರನ್ನಾಗಿ ಮಾಡುತ್ತೇವೆ ಎಂದು ವಸೂಲು ಮಾಡುತ್ತಿರುವ ತೆರಿಗೆ ಹಣವನ್ನು ಗ್ರಾಮ ಪಂಚಾಯಿತಿಗಳು ಅನ್ಯ ಉದ್ದೇಶಗಳಿಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿವೆ.

ಭಿಕ್ಷುಕರ ಪುನರ್ವಸತಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಭಿಕ್ಷಾಟನಾ ಉಪಕರ ಮತ್ತು ಹಳ್ಳಿ ಜನರನ್ನು ಜ್ಞಾನ
ವಂತರನ್ನಾಗಿ ಮಾಡಲು ಗ್ರಂಥಾಲಯ ಉಪಕರವನ್ನು ಗ್ರಾಮಪಂಚಾಯಿತಿಗಳು ಸಂಗ್ರಹಿಸುತ್ತಿವೆ. ಇಲ್ಲಿಯವರೆಗೆ ಈ ಉದ್ದೇಶಕ್ಕೆ ಬಿಡಿಗಾಸೂ ನೀಡಿಲ್ಲ. ಅನ್ಯ ಉದ್ದೇಶಗಳಿಗೆ ಬಳಸಿದ್ದು, ನೂರಾರು ಕೋಟಿ ದುರ್ಬಳಕೆ ಮಾಡಲಾಗಿದೆ.

ಗ್ರಂಥಾಲಯ, ಭಿಕ್ಷಾಟನಾ ಕರ ಮಾತ್ರವಲ್ಲದೆ, ಆರೋಗ್ಯ ಉಪಕರವನ್ನೂ ವೇತನ ವೆಚ್ಚ ಸೇರಿ ವಿವಿಧ ಉದ್ದೇಶಕ್ಕೆ ಬಳಸಿರುವುದನ್ನು ಭಾರತೀಯ ಮಹಾಲೇಖಪಾಲರ ವರದಿ (ಸಿಎಜಿ) ಗುರುತಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ADVERTISEMENT

ರಾಜ್ಯದ 6,022 ಗ್ರಾಮ ಪಂಚಾಯಿತಿಗಳ ಪೈಕಿ 59 ಗ್ರಾಮ ಪಂಚಾಯಿತಿಗಳ ಲೆಕ್ಕಪತ್ರ ತಪಾಸಣೆ ನಡೆಸಲಾಯಿತು. 2012–13 ರಿಂದ 2016–17 ರ ಅವಧಿಯಲ್ಲಿ ಈ ಗ್ರಾಮ ಪಂಚಾಯತಿಗಳಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಮೊತ್ತದ ಮೇಲೆ ಆರೋಗ್ಯ, ಗ್ರಂಥಾಲಯ ಮತ್ತು ಭಿಕ್ಷಾಟನಾ ಉಪಕರವೆಂದು ₹ 1.45 ಕೋಟಿ ಸಂಗ್ರಹಿಸಿವೆ ಎಂದು ಹೇಳಿದೆ.

ಆದರೆ ಕಾನೂನು, ಸುಪ್ರೀಂಕೋರ್ಟ್‌ ನಿರ್ದೇಶನ ಮತ್ತು ರಾಜ್ಯ ಸರ್ಕಾರದ ಸೂಚನೆ ಉಲ್ಲಂಘಿಸಿ ಈ ಹಣವನ್ನು ವೇತನ ವೆಚ್ಚ, ಅಭಿವೃದ್ಧಿ ಕಾಮಗಾರಿ, ಬೀದಿ ದೀಪ, ನೀರಿನ ಬಿಲ್‌ ಮತ್ತು ಇತರ ವೆಚ್ಚಗಳನ್ನು ಭರಿಸಲು ಬಳಸಿವೆ. ಬಳಕೆ ಆಗದೇ ಉಳಿದ ಅಲ್ಪ ಮೊತ್ತವನ್ನು ತಮ್ಮ ಬಳಿಯೇ ಉಳಿಸಿಕೊಂಡಿವೆ. 6,022 ಗ್ರಾಮ ಪಂಚಾಯಿತಿಗಳು ಸಂಗ್ರಹಿಸಿರುವ ಒಟ್ಟುಗೂಡಿಸಿದರೆ, ಉಪಕರದ ಮೊತ್ತ ನೂರಾರು ಕೋಟಿ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ಅದರಲ್ಲೂ ಭಿಕ್ಷಾಟನಾ ಕರವನ್ನು ವರ್ಗಾವಣೆ ಮಾಡಿರುವುದಕ್ಕೆ ತೀವ್ರ ಆಕ್ಷೇಪಿಸಿರುವ ಸಿಎಜಿ, ‘ಭಿಕ್ಷಾಟನಾ ಉಪಕರವನ್ನು ಸಂಗ್ರಹಿ
ಸಿದ ನಂತರ ಅದನ್ನು ತನ್ನಲ್ಲೇ ಉಳಿಸಿಕೊಳ್ಳುವ ಕ್ರಮವು ನಿಸ್ಸಂದೇಹವಾಗಿ ದುರ್ಬಳಕೆ ಮತ್ತು ಗಂಭೀರ ದಂಡದ ಪರಿಣಾಮಗಳಿಗೆ ಕಾರಣವಾಗುತ್ತದೆ. ಕೇಂದ್ರ ಪರಿಹಾರ ಸಮಿತಿಗೆ ವರ್ಗಾಯಿಸಬೇಕಾದ ಭಿಕ್ಷಾಟನಾ ಉಪಕರ ಮೊತ್ತವನ್ನು ವರ್ಗಾವಣೆ ಮಾಡದಿರುವುದಕ್ಕೆ ಕ್ಷಮೆ ಇಲ್ಲ’ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿಕೆಯನ್ನೂ ಉಲ್ಲೇಖಿಸಿದೆ.

2016ರ ವರದಿಯಲ್ಲೂ ಈ ಬಗ್ಗೆ ಸಿಎಜಿ ಎಚ್ಚರಿಕೆ ನೀಡಿತ್ತು. ನಂತರ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದು, ವಿವಿಧ ಉಪಕರಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಜಮೆ ಮಾಡಬೇಕೆಂದು ನಿರ್ದೇಶನ ನೀಡಿತ್ತು. 2018 ರ ಮಾರ್ಚ್‌ 31 ರ ಒಳಗೆ ಜಮೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂಬ ಸೂಚನೆಯನ್ನು ಗ್ರಾಮ ಪಂಚಾಯಿತಿಗಳು ಪಾಲಿಸಿಲ್ಲ ಎಂದು ಹೇಳಿದೆ.

ಗ್ರಾಮ ಪಂಚಾಯಿತಿಗಳ ಈ ನಡವಳಿಕೆ ಉಪಕರ ಸಂಗ್ರಹದ ನೈಜ ಉದ್ದೇಶವನ್ನೇ ವಿಫಲಗೊಳಿಸಿದೆ. ಆದ್ದರಿಂದ, ರಾಜ್ಯ ಸರ್ಕಾರ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಉಪಕರ ಬಳಕೆಯ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.