ಹೈಕೋರ್ಟ್
ಬೆಂಗಳೂರು: ‘ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮ ಪಂಚಾಯಿತಿಯಿಂದ ಬೊಮ್ಮನಾಳ ಹಾಗೂ ಬೀರನಾಳ ಗ್ರಾಮಗಳನ್ನು ಬೇರ್ಪಪಡಿಸಿ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸುವಂತೆ ಕೋರಿ ಗ್ರಾಮಸ್ಥರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಸಂಬಂಧ ರಾಯಬಾಗ ತಾಲ್ಲೂಕಿನ ರಾಮ ಅಣ್ಣಪ್ಪ ಸವಸುದ್ದಿ ಹಾಲಪ್ಪ ಬಾಗಿ ಭೈರು ಧನಪಾಲ್ ಕಾಂಬ್ಳೆ ಗೂಳಪ್ಪ ಮಸಗೊಂಡೆ ಮತ್ತು ಸುಭಾಷ್ ಯಲ್ಲಪ್ಪ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ‘ಅರ್ಜಿದಾರರ ಮನವಿಯನ್ನು ಕಾನೂನು ರೀತ್ಯಾ ಪರಿಗಣಿಸಿ ನಾಲ್ಕು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
ಅರ್ಜಿಯಲ್ಲಿ ಏನಿತ್ತು?:
‘ಬ್ಯಾಕೂಡ ಗ್ರಾ.ಪಂ ಬೊಮ್ಮನಾಳ ಗ್ರಾಮದಿಂದ 15 ಕಿ.ಮೀ ದೂರ ಇದೆ. ಈ ಗ್ರಾಮದ ಜನರು ಗ್ರಾ.ಪಂ ಕೇಂದ್ರ ಸ್ಥಾನಕ್ಕೆ ಹೋಗಬೇಕಾದರೆ ರಾಯಬಾಗ ಪಟ್ಟಣದ ಮೂಲಕ ಪ್ರಯಾಣಿಸಬೇಕು. ಇದರಿಂದ ಜನಸಾಮಾನ್ಯರು ಮಹಿಳೆಯರು ಹಿರಿಯ ನಾಗರಿಕರು ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ’ ಎಂದು ಅರ್ಜಿದಾರರು ದೂರಿದ್ದರು. ‘2011ರ ಜನಗಣತಿ ಪ್ರಕಾರ ಬ್ಯಾಕೂಡ ಗ್ರಾಮದ ಜನಸಂಖ್ಯೆ 3470 ಬೊಮ್ಮನಾಳದ ಸಂಖ್ಯೆ 2904 ಮತ್ತು ಬೀರನಾಳದ ಜನಸಂಖ್ಯೆ 1611 ಇದೆ. ಈ ಮೂರೂ ಗ್ರಾಮಗಳ ಒಟ್ಟು ಜನಸಂಖ್ಯೆ 7985 ಆಗುತ್ತದೆ. ಇವುಗಳಿಗೆ ಒಟ್ಟು 20 ಗ್ರಾ.ಪಂ ಸದಸ್ಯರಿದ್ದಾರೆ. ಅದರಲ್ಲಿ ಬೊಮ್ಮನಾಳದ 6 ಬೀರನಾಳದ 3 ಸದಸ್ಯರಿದ್ದಾರೆ’ ಎಂದು ವಿವರಿಸಿದ್ದರು. ‘ಬ್ಯಾಕೂಡ ಗ್ರಾ.ಪಂ ಕಚೇರಿ ಬೊಮ್ಮನಾಳ ಮತ್ತು ಬೀರನಾಳ ಗ್ರಾಮದಿಂದ 6 ಕಿ.ಮೀ ದೂರ ಇದೆ. ಇಲ್ಲಿಗೆ ನೇರ ಬಸ್ ಸೌಲಭ್ಯ ಇಲ್ಲ. ಇಷ್ಟೇ ಜನಸಂಖ್ಯೆ ಇರುವ ಬೇರೆ ಗ್ರಾಮಗಳನ್ನು ಈಗಾಗಲೇ ಪ್ರತ್ಯೇಕ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡಲಾಗಿದೆ. ಆದ್ದರಿಂದ ಬೊಮ್ಮನಾಳ ಮತ್ತು ಬೀರನಾಳ ಗ್ರಾಮಗಳನ್ನು ಬ್ಯಾಕೂಡ ಗ್ರಾ.ಪಂಚಾಯಿತಿಯಿಂದ ಬೇರ್ಪಡಿಸಿ ಪ್ರತ್ಯೇಕ ಗ್ರಾ.ಪಂ ರಚಿಸಬೇಕು. ಈ ಸಂಬಂಧ 2020ರ ಸೆಪ್ಟೆಂಬರ್ 2ರಂದು ಗ್ರಾಮಸ್ಥರು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.