ADVERTISEMENT

ಬೆಳಗಾವಿ: ಹೆಚ್ಚಿದ ಅತಂಕ, ಲಾಕ್‌ಡೌನ್‌ ಮತ್ತಷ್ಟು ಬಿಗಿ

ಜಿಲ್ಲೆಯ ಮೂವರಿಗೆ ಕೋವಿಡ್–19 ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 14:30 IST
Last Updated 3 ಏಪ್ರಿಲ್ 2020, 14:30 IST
ಬೆಳಗಾವಿಯ ಮಹಾಂತೇಶ ನಗರ ನಂದಿನಿ ಡೈರಿ ಸಮೀಪದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ
ಬೆಳಗಾವಿಯ ಮಹಾಂತೇಶ ನಗರ ನಂದಿನಿ ಡೈರಿ ಸಮೀಪದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ   

ಬೆಳಗಾವಿ: ಜಿಲ್ಲೆಯ ಮೂವರಿಗೆ ಕೋವಿಡ್‌–19 ತಗುಲಿರುವುದು ದೃಢಪಟ್ಟಿರುವುದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಲಾಕ್‌ಡೌನ್‌ ಅನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ರಸ್ತೆಗಳಲ್ಲಿ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಅಲ್ಲಲ್ಲಿ ಪೊಲೀಸರು, ಜನರು ಮನೆಗಳಿಂದ ಬಾರದಂತೆ ಮೈಕ್‌ಗಳಲ್ಲಿ ಅನೌನ್ಸ್‌ ಮಾಡಿ ಎಚ್ಚರಿಕೆ ನೀಡಿದರು. ನೆರೆಯ ಮಹಾರಾಷ್ಟ್ರದಲ್ಲೂ ಹೆಚ್ಚಿನ ಪ್ರಕರಣಗಳು ಕಂಡುಬಂದಿರುವುದರಿಂದಾಗಿ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಪಾಸಿಟಿವ್ ಪ್ರಕರಣಗಳು ಬಂದಿವೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ ನಗರ ಸ್ತಬ್ಧವಾಯಿತು.

‌ರೋಗಿ ‘ನಂ.126’ (70 ವರ್ಷ), ‘ನಂ.127’ (26) ಹಾಗೂ ‘ನಂ.128’ (20) ಇವರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಅವರೆಲ್ಲರೂ ಮಾರ್ಚ್‌ 13ರಿಂದ 18ರವರೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನು ಇಲ್ಲಿನ ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಒಬ್ಬರು ನಗರ ಹಾಗೂ ಇಬ್ಬರು ತಾಲ್ಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇವರು ರೈಲಿನಲ್ಲಿ ಬೆಳಗಾವಿಗೆ ವಾಪಸಾಗಿದ್ದಾರೆ. ಅವರ ಪ್ರಯಾಣದ ಮಾಹಿತಿ ಹಾಗೂ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ತಬ್ಲೀಗ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ಒಟ್ಟು 62 ಜನರು ಭಾಗವಹಿಸಿದ್ದರು. ಅವರಲ್ಲಿ ಯಾರಿಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. 42 ಜನರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 33 ಮಂದಿಯ ಗಂಟಲು ದ್ರವದ ‌ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಗುರುವಾರ ತಿಳಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧೆಡೆ ಸೋಂಕುನಿವಾರಕ ಸಿಂಪಡಿಸುವ ಕಾರ್ಯ ನಡೆಯಿತು.

ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಗಳಿದ್ದ ಪ್ರದೇಶಗಳನ್ನು ಬಫರ್‌ ಝೋನ್‌ ಎಂದು ಗುರುತಿಸಲಾಗಿದೆ. ಹೈಅಲರ್ಟ್‌ ಘೋಷಿಸಲಾಗಿದೆ. ಆ ಭಾಗದಲ್ಲಿ ವಾಸವಿರುವವರ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸೋಂಕಿನ ಲಕ್ಷಣವುಳ್ಳವರು ಕಂಡುಬಂದಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

‘ಸರ್ಕಾರದ ನಿರ್ದೇಶನದ ಮೇರೆಗೆ ಸ್ಥಳೀಯವಾಗಿ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ನಡುವೆ, ದೆಹಲಿಯ ನಿಜಾಮುದ್ದೀನ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಸ್ವಗ್ರಾಮಕ್ಕೆ ಬಂದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಸವದತ್ತಿ ತಾಲ್ಲೂಕಿನ ಮುರಗೋಡ ಗ್ರಾಮಸ್ಥರು 10 ಮಂದಿಯನ್ನು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.