ADVERTISEMENT

1,500 ಎಂಜಿನಿಯರ್‌ಗಳ ನೇಮಕಕ್ಕೆ ಮುಂದಾದ ಬೆಳಗಾವಿಯ ಕ್ವೆಸ್ಟ್‌ ಕಂಪನಿ

ಬೆಳಗಾವಿ ಮೂಲದ ಎಂಜಿನಿಯರ್‌ಗಳಿಗೆ ಆದ್ಯತೆ;

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 12:39 IST
Last Updated 27 ಫೆಬ್ರುವರಿ 2020, 12:39 IST
ಶ್ರೀಕಾಂತ ಡಿ.ನಾಯ್ಕ್‌
ಶ್ರೀಕಾಂತ ಡಿ.ನಾಯ್ಕ್‌   

ಬೆಳಗಾವಿ: ಇಲ್ಲಿಗೆ ಸಮೀಪದ ಹತ್ತರಗಿಯಲ್ಲಿರುವ ಘಟಕದಲ್ಲಿ 5 ವರ್ಷಗಳಲ್ಲಿ 1,500 ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವ ಕ್ವೆಸ್ಟ್‌ ಗ್ಲೋಬಲ್‌ ಕಂಪನಿಯು, ಪರಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಮೂಲದ ಎಂಜಿನಿಯರ್‌ಗಳಿಗೆ ಆದ್ಯತೆ ನೀಡುವುದಾಗಿ ಹೇಳಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಮುಖ್ಯಸ್ಥ ಶ್ರೀಕಾಂತ ಡಿ.ನಾಯ್ಕ್‌, ‘ಈ ಘಟಕದಲ್ಲಿ ಪ್ರಸ್ತುತ 500 ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಘಟಕದ ಕಾರ್ಯಚಟುವಟಿಕೆಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎಂಜಿನಿಯರ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಅದಕ್ಕಾಗಿ ಹೊಸ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 2025ರ ವೇಳೆಗೆ ಎಂಜಿನಿಯರ್‌ಗಳ ಸಂಖ್ಯೆ 2,000ಕ್ಕೆ ತಲುಪಲಿದೆ’ ಎಂದರು.

‘ಈ ಘಟಕದಲ್ಲಿ ವೈಮಾನಿಕ (ಏರೊಸ್ಪೇಸ್‌) ಹಾಗೂ ತೈಲ (ಆಯಿಲ್‌ ಅಂಡ್‌ ಗ್ಯಾಸ್‌) ಕ್ಷೇತ್ರಕ್ಕೆ ಸಂಬಂಧಿಸಿದ ಯೂನಿಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಮೆಕ್ಯಾನಿಕಲ್‌, ಮ್ಯಾನುಫ್ಯಾಕ್ಚರಿಂಗ್‌ ಹಾಗೂ ಡಿಜಿಟಲ್‌ ವಿಭಾಗದ ಎಂಜಿನಿಯರ್‌ಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಸೇವಾ ಅನುಭವ ಇರುವವರು ಹಾಗೂ ಇಲ್ಲದವರು ಕೂಡ ಅರ್ಜಿ ಸಲ್ಲಿಸಬಹುದು’ ಎಂದು ನುಡಿದರು.

ADVERTISEMENT

‘ಬೆಳಗಾವಿ ಘಟಕದಲ್ಲಿ ಕಾರ್ಯನಿರ್ವಹಿಸುವವರು ಬಹುತೇಕ ಸುತ್ತಮುತ್ತಲಿನ ಊರಿನವರಾಗಿದ್ದಾರೆ. ಹೀಗಾಗಿ, ಬೇರೆ ಘಟಕಗಳಿಗೆ ಹೋಲಿಸಿದರೆ ಇಲ್ಲಿ ಕಂಪನಿ ತೊರೆಯುವವರ ಸಂಖ್ಯೆ ಶೇ 5ಕ್ಕಿಂತಲೂ ಕಡಿಮೆ ಇದೆ. ಅದೇ ಕಾರಣಕ್ಕಾಗಿ, ಮುಂದಿನ ದಿನಗಳಲ್ಲಿಯೂ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಇವತ್ತಿನ ಹಿಂಜರಿತವು ಜಾಗತಿಕವಾದುದಲ್ಲ, ಸ್ಥಳೀಯವಾಗಿ ಅಲ್ಲಲ್ಲಿ, ಕೆಲವೊಂದು ಕ್ಷೇತ್ರಗಳಲ್ಲಿ ಮಾತ್ರ ಕಂಡುಬಂದಿದೆ. ನಮ್ಮ ಕಂಪನಿಯು ವೈಮಾನಿಕ ಕ್ಷೇತ್ರದ ಜೊತೆ ತೈಲ, ಸಾರಿಗೆ (ಆಟೊ– ರೈಲು), ವಿದ್ಯುತ್‌ ಹಾಗೂ ಕೈಗಾರಿಕೆ, ವೈದ್ಯಕೀಯ ಉಪಕರಣಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಹೀಗಾಗಿ, ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಲು ಸಶಕ್ತವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಳಗಾವಿ ಘಟಕದ ಮುಖ್ಯಸ್ಥ ಸಂದೇಶ ಮಾತನಾಡಿ, ‘ಈ ಘಟಕ ಸ್ಥಾಪಿಸಿ 10 ವರ್ಷಗಳು ಕಳೆದಿವೆ. ಘಟಕದ ಪ್ರಗತಿ ಉತ್ತಮವಾಗಿದೆ. ನೇಮಕಾತಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.