ಹೈಕೋರ್ಟ್
ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ಜಪ್ತಿ ಮಾಡಿರುವ ಅದಿರನ್ನು ಬಿಡುಗಡೆ ಮಾಡುವ ಸಂಬಂಧದ ಪ್ರಕರಣದ ವಿಚಾರಣೆಯನ್ನು ಮೂರು ತಿಂಗಳಲ್ಲಿ ಮುಗಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ನೀಡಿದೆ.
ಹೈಕೋರ್ಟ್‌ನ ಧಾರವಾಡ ಪೀಠದ ಆದೇಶ ಪ್ರಶ್ನಿಸಿ ವಲಯ ಅರಣ್ಯ ಅಧಿಕಾರಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಹಾಗೂ ಉಜ್ಜಲ್ ಭುಯಾನ್ ಪೀಠವು, ‘2009–10ರ ಅವಧಿಯಲ್ಲಿ ಈ ಅದಿರನ್ನು ಜಪ್ತಿ ಮಾಡಲಾಗಿತ್ತು. ಪುರಾವೆಗಳ ಆಧಾರದಲ್ಲಿ ಹೈಕೋರ್ಟ್ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಲಿದೆ. ಜಪ್ತಿ ಮಾಡಿರುವ ಅದಿರಿನ ಮಾಲೀಕತ್ವದ ಬಗ್ಗೆ ನಾವು ಯಾವುದೇ ಅಭಿಪ್ರಾಯ ವ್ಯಕ್ತ ಪಡಿಸುವುದಿಲ್ಲ‘ ಎಂದು ಸ್ಪಷ್ಟಪಡಿಸಿದೆ.
ಬೇಲೆಕೇರಿ ಬಂದರಿನಿಂದ ಭಾರಿ ಪ್ರಮಾಣದ ಅದಿರು ನಾಪತ್ತೆಯಾದ ಪ್ರಕರಣದಲ್ಲಿ ಬಂದರು ಸೇವಾ ಕಂಪನಿಗಳಾದ ರಾಜ್‌ಮಹಲ್ ಸಿಲ್ಕ್ಸ್ ಸೇರಿದಂತೆ ನಾಲ್ಕು ಕಂಪನಿಗಳು ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿವೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿ ನೀಡಿತ್ತು. ಬಂದರಿನಲ್ಲಿ 9.06 ಲಕ್ಷ ಟನ್ ಅಕ್ರಮ ಅದಿರನ್ನು ಜಪ್ತಿ ಮಾಡಲಾಗಿತ್ತು.
ಈ ಅದಿರನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ರಾಜ್‌ಮಹಲ್ ಸಿಲ್ಕ್ಸ್ ಕಂಪನಿಯು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿತ್ತು. ಜಪ್ತಿ ಮಾಡಿರುವ ಅದಿರು ತಮ್ಮ ಕಂಪನಿಗೆ ಸೇರಿದ್ದು ಎಂಬ ಬಗ್ಗೆ ಯಾವುದೇ ದಾಖಲೆಗಳನ್ನು ನೀಡುವಲ್ಲಿ ಕಂಪನಿ ವಿಫಲವಾಗಿದೆ ಎಂಬ ಕಾರಣ ನೀಡಿ ವಿಚಾರಣಾ ನ್ಯಾಯಾಲಯವು ಈ ಅರ್ಜಿ ತಿರಸ್ಕರಿಸಿತ್ತು. ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಕಂಪನಿ ಪರ ವಾದ ಮಂಡಿಸಿದ್ದ ವಕೀಲರು, ’ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ತನಿಖಾ ಸಂಸ್ಥೆಯು ಮುಕ್ತಾಯದ ವರದಿ ಸಲ್ಲಿಸಿದೆ. ವಶಪಡಿಸಿಕೊಂಡ ಸರಕುಗಳ ಮಾಲೀಕತ್ವದ ಬಗ್ಗೆ ಯಾವುದೇ ವಿವಾದ ಇಲ್ಲ. ಈ ಅದಿರು ಬಿಡುಗಡೆ ಮಾಡಬೇಕು‘ ಎಂದು ಕೋರಿದರು.
‘ವಿಚಾರಣಾ ನ್ಯಾಯಾಲಯದ ಆದೇಶವು ವಿಕೃತವಾಗಿದ್ದರೆ, ಈ ಬಗ್ಗೆ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಬೇಕಿತ್ತು.ಆದರೆ, ಹೈಕೋರ್ಟ್ ಈ ಕೆಲಸ ಮಾಡಿಲ್ಲ. ಹೀಗಾಗಿ, ಹೈಕೋರ್ಟ್ ಮತ್ತೆ ವಿಚಾರಣೆ ನಡೆಸುವುದು ಸೂಕ್ತ‘ ಎಂದು ನ್ಯಾಯಪೀಠ ಅಭಿಪ‍್ರಾಯಪಟ್ಟಿದೆ.
ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದ ಗಳಿಸಿದ ಸ್ವತ್ತು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೃಷ್ಣ ರಾವು ಅವರನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾವು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿಕೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಲೆಕ್ಕಕ್ಕೇ ಸಿಗದಷ್ಟು ಗುತ್ತಿಗೆದಾರರು, ಸಾಗಣೆದಾರರು, ರಫ್ತುದಾರರು, ದಾಸ್ತಾನುದಾರರು, ಖರೀದಿದಾರರು ಮತ್ತು ಇತರ ಮಧ್ಯವರ್ತಿಗಳು ಅಕ್ರಮ ಗಣಿಗಾರಿಕೆ ಚಟುವಟಿಕೆ, ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚಿನ ಮೂಲಕ ಅಕ್ರಮವಾಗಿ ಸ್ವತ್ತು ಗಳಿಸಿದ್ದಾರೆ.
ಹೀಗೆ ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ವಶಪಡಿಸಿಕೊಳ್ಳಲು ವಸೂಲಾತಿ ಆಯುಕ್ತರನ್ನು ನೇಮಿಸಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ರೂಪಿಸಿದ್ದ ಕಾಯ್ದೆಗೆ ಅನುಗುಣವಾಗಿ ಈ ನೇಮಕಾತಿ ಮಾಡಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಕೃಷ್ಣ ರಾವು ಅವರಿಗೆ ಮೂಲ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಸೇರಿ ಮಾಸಿಕ ಒಟ್ಟು ₹ 2,95,256 ವೇತನ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.