ADVERTISEMENT

ಇಹಲೋಕ ತ್ಯಜಿಸಿದ ಸಿನಿಮಾವತ್ಸಲ, ಬಹುಮುಖಿ ‘ಭಕ್ತ’

ಚ.ಹ.ರಘುನಾಥ
Published 5 ಆಗಸ್ಟ್ 2018, 19:30 IST
Last Updated 5 ಆಗಸ್ಟ್ 2018, 19:30 IST
   

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಸಾಂಸ್ಥಿಕ ಸ್ವರೂಪದೊಂದಿಗೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟ ಎಂ. ಭಕ್ತವತ್ಸಲ ಅವರದು ಬಹುಮುಖ ಆಸಕ್ತಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿತ್ವ.

ಭಕ್ತವತ್ಸಲ (ಡಿ. 10, 1934) ಅವರು ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ. ‘ನನ್ನ ನೆಲ ಶಿವಮೊಗ್ಗ. ನನ್ನ ಹೃದಯ ಶಿವಮೊಗ್ಗ’ ಎಂದವರು ಭಾವುಕರಾಗಿ ಹೇಳಿಕೊಂಡಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವಿಯನ್ನೂ ಮ್ಯಾಂಚೆಸ್ಟರ್‌ನಲ್ಲಿ ಎಂ.ಬಿ.ಎ. ಪದವಿಯನ್ನೂ ಪಡೆದಿದ್ದ ಅವರು, ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಲಿತ ಮ್ಯಾನೇಜ್‌ಮೆಂಟ್‌ ಪಟ್ಟುಗಳನ್ನು ದೇಸಿ ಚಿತ್ರೋದ್ಯಮದಲ್ಲಿ ಪ್ರಯೋಗಿಸಿ ಯಶಸ್ಸುಕಂಡರು.

ಚಿತ್ರೋದ್ಯಮಕ್ಕೂ ಮೊದಲು ಅವರು ಕಾರ್ಯನಿರ್ವಹಿಸಿದ್ದು ಗಡಿಯಾರಗಳನ್ನು ತಯಾರಿಸುತ್ತಿದ್ದ ‘ಹಿಂದೂಸ್ಥಾನ್‌ ಮೆಷಿನ್ ಟೂಲ್ಸ್‘ ಸಂಸ್ಥೆಯಲ್ಲಿ. ಪಂಜಾಬ್‌ ಹಾಗೂ ಕೇರಳಗಳಲ್ಲಿ ‘ಎಚ್‌ಎಂಟಿ’ ಶಾಖೆಗಳು ರೂಪುಗೊಳ್ಳುವಲ್ಲಿ ಅವರ ಶ್ರಮ ದೊಡ್ಡದು. ಕಾಖಾನೆಯಲ್ಲಿನ ಕೆಲಸ ಏಕತಾನ ಎನ್ನಿಸಿದಾಗ ಅವರ ಚಿತ್ತ ಹರಿದದ್ದು ಚಿತ್ರರಂಗದತ್ತ.

ADVERTISEMENT

ಅವರಿಗೆ ಸಿನಿಮಾ ನಂಟು ಹೊಸದೇನಾಗಿರಲಿಲ್ಲ. 1930ರ ಸಮಯದಲ್ಲಿಯೇ ಅವರ ಚಿಕ್ಕಪ್ಪ ಮೂಲ ಲಕ್ಷ್ಮೀನಾರಾಯಣಸ್ವಾಮಿ ಮದ್ರಾಸ್‌ನಲ್ಲಿ ‘ವಾಹಿನಿ ಸ್ಟುಡಿಯೊ’ ಸ್ಥಾಪಿಸಿದ್ದರು. ತಮಿಳು ಚಿತ್ರರಂಗದ ಪ್ರಾತಃಸ್ಮರಣೀಯರಲ್ಲೊಬ್ಬರಾದ ಎಂ.ವಿ. ಮೇಯಪ್ಪನ್ ಪ್ರಭಾವವೂ ಭಕ್ತವತ್ಸಲರ ಮೇಲಿತ್ತು.

ಮೆಲು ಮಾತಿನ, ನಿರಂತರ ದುಡಿಮೆಯ ಭಕ್ತವತ್ಸಲ ಚಿತ್ರರಂಗದಲ್ಲಿ ‘ಭಕ್ತ’ ಎಂದೇ ಪ್ರಸಿದ್ದರು. ಚಿತ್ರರಂಗದಲ್ಲಿ ಅವರ ಸಾಧನೆಯನ್ನು ಎರಡು ಬಗೆಯಲ್ಲಿ ಗುರ್ತಿಸಬಹುದು. ಒಂದು, ನಿರ್ದಿಷ್ಟ ಚಹರೆಯೇ ಇಲ್ಲದಿದ್ದ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ರಾಷ್ಟ್ರೀಯ ವರ್ಚಸ್ಸು ತಂದುಕೊಟ್ಟಿದ್ದು. ನಿರ್ಮಾಪಕರಾಗಿ, ಪ್ರದರ್ಶಕರಾಗಿ, ಹಂಚಿಕೆದಾರರಾಗಿ ಪ್ರಯೋಗಶೀಲ ಚಿತ್ರಗಳನ್ನು ಉತ್ತೇಜಿಸಿದ್ದು ಇನ್ನೊಂದು ಸಾಧನೆ.

1970ರಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಅವರು, ಎಂಟು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಮಂಡಳಿಯ ತಳಹದಿಯನ್ನು ಗಟ್ಟಿಗೊಳಿಸಿದರು. ಸಣ್ಣ ಕೋಣೆಯಲ್ಲಿದ್ದ ಮಂಡಳಿಯನ್ನು ಬೃಹತ್ತಾಗಿ ಬೆಳೆಸಿದರು. ಪ್ರದರ್ಶಕ, ವಿತರಕ ಹಾಗೂ ನಿರ್ಮಾಪಕರ ವಲಯಗಳನ್ನು ರೂಪಿಸುವ ಜೊತೆಗೆ, ಮಂಡಳಿಗೆ ಸ್ವಯಂ ನಿಯಂತ್ರಣಾ ನಿಯಮಗಳನ್ನು ರೂಪಿಸಿದರು. ಇದರಿಂದಾಗಿ ಚಿತ್ರೋದ್ಯಮದ ವ್ಯಾಜ್ಯಗಳು ಕೋರ್ಟಿನ ಬದಲು ಮಂಡಳಿಯಲ್ಲೇ ಇತ್ಯರ್ಥವಾಗುವಂತಾಯಿತು.

ಭಕ್ತ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ವಾಣಿಜ್ಯ ಮಂಡಳಿ ಇಂದಿನಂತೆ ವ್ಯಾಪಾರಿ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಸಿನಿಮಾ ಚಿಂತಕರ ಮತ್ತು ನಿರ್ಮಾತೃಗಳ ಕೇಂದ್ರವಾಗಿ ಅದು ಗುರ್ತಿಸಿಕೊಂಡಿತ್ತು. 1971ರಲ್ಲಿ ಭಕ್ತ ಅವರ ನೇತೃತ್ವದಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತ ಸಮಾವೇಶದಲ್ಲಿ ದೇಶದ ಪ್ರಸಿದ್ಧ ಸಿನಿಮಾ ನಿರ್ಮಾತೃಗಳು ಭಾಗವಹಿಸಿದ್ದರು.

ಅವರ ಹೆಸರಿನಲ್ಲಿನ ಪೊರೆಯುವ ಗುಣದ ವಾತ್ಸಲ್ಯ ಕೃತಿಯಲ್ಲಿಯೂ ಇತ್ತು. ಪ್ರದರ್ಶಕರಾಗಿ, ಹಂಚಿಕೆದಾರರಾಗಿ ಕೂಡ ಅವರ ಒಲವು ಪ್ರಯೋಗಶೀಲ ಚಿತ್ರಗಳ ಕಡೆಗಿತ್ತು. ಎಂ.ಎಸ್‌. ಸತ್ಯು ನಿರ್ದೇಶನದ ‘ಗರಂ ಹವಾ’ ಚಿತ್ರವನ್ನು ದಕ್ಷಿಣ ಭಾರತದಲ್ಲಿ ವಿತರಣೆ ಮಾಡಿದ್ದರು. ‘ಸಂಸ್ಕಾರ’, ‘ಕಾಡು’, ‘ವಂಶವೃಕ್ಷ’ ಚಿತ್ರಗಳನ್ನು ವಿತರಿಸಿದ್ದು ಹಾಗೂ ‘ಕನ್ನೇಶ್ವರ ರಾಮ’ ಚಿತ್ರವನ್ನು ನಿರ್ಮಿಸಿದ್ದು ಕೂಡ ಪರ್ಯಾಯ ಚಿತ್ರಗಳ ಅವರ ಒಲವಿಗೆ ಸಾಕ್ಷಿಯಂತಿತ್ತು. ಪಟ್ಟಾಭಿರಾಮರೆಡ್ಡಿ ನಿರ್ದೇಶನದ ‘ಚಂಡಮಾರುತ’ ಅವರು ನಟಿಸಿದ ಸಿನಿಮಾ.

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಅಖಿಲ ಭಾರತ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಾಗಿ, ಸೆನ್ಸಾರ್‌ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ‘ಭಾರತೀಯ ಚಲನಚಿತ್ರ ನೀತಿ’ಗೆ ಸಂಬಂಧಿಸಿದಂತೆ ಶಿವರಾಮ ಕಾರಂತ, ಶ್ಯಾಮ್‌ ಬೆನಗಲ್, ರಮಾನಂದ ಸಾಗರ್‌ ಅವರಿದ್ದ ಸಮಿತಿಯ ಸದಸ್ಯರಾಗಿ ಎರಡೂವರೆ ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿನ ಚಿತ್ರೋದ್ಯಮದ ಅಧ್ಯಯನ ನಡೆಸಿದ್ದರು. ಕನ್ನಡ ಚಿತ್ರರಂಗಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ಅವರ ರಾಜ್ಯ ಸರ್ಕಾರದ ‘ರಾಜ್‌ಕುಮಾರ್ ಪ್ರಶಸ್ತಿ’ ದೊರೆತಿದೆ.

ಲಂಡನ್‌ನಿಂದ ಪಾಕಿಸ್ತಾನದ ಗಡಿಭಾಗದವರೆಗೆ ಜೀಪ್‌ನಲ್ಲಿ ಎಂಟು ಸಾವಿರ ಕಿ.ಮೀ.ಗಳ ಖಂಡಾಂತರ ಪಯಣ ಕೈಗೊಂಡಿದ್ದು ಅವರ ಸಾಹಸಿ ಜೀವನದ ಮೈಲುಗಲ್ಲುಗಳಲ್ಲೊಂದು.

ಸಿನಿಮಾಪ್ರೇಮಿಯಾಗಿದ್ದಂತೆ ಭಕ್ತವತ್ಸಲ ಸಾಹಿತ್ಯದ ಪ್ರೇಮಿಯೂ ಆಗಿದ್ದರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅವರ ಓದು ದೊಡ್ಡದಾಗಿತ್ತು. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಬರಹಗಾರರಾಗಿಯೂ ಗುರ್ತಿಸಿಕೊಂಡಿದ್ದ ಅವರು, ತಮ್ಮ ಜೀವನದ ಕೆಲವು ನೆನಪುಗಳನ್ನು ‘ಗೋಪಿ ಸರ್ಕಲ್’ ಎನ್ನುವ ಕೃತಿಯಲ್ಲಿ ದಾಖಲಿಸಿದ್ದಾರೆ. ‘ದಿ ‍ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ.’ ಸಂಸ್ಥೆಯ ಮೊದಲ ಕಾರ್ಯದರ್ಶಿ ಯಾಗಿದ್ದರು. ನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗದ ತಾತ್ವಿಕ ತಳಹದಿ ಇನ್ನಷ್ಟು ಸವಕಳಿಯಾಗಿದೆ. ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ.

*<ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕನ್ನಡ ಚಿತ್ರರಂಗ ತನ್ನನ್ನು ತೆರೆದುಕೊಳ್ಳುವಲ್ಲಿ ಭಕ್ತವತ್ಸಲ ಅವರ ಪಾತ್ರ ಮುಖ್ಯವಾದುದು.

- ಎಸ್‌.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕ–ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.