ADVERTISEMENT

ಭೀಮಾ ತೀರದಲ್ಲಿ ತಗ್ಗುತ್ತಿರುವ ನೆರೆ: ದೂರವಾಗದ ಆತಂಕ

ನೀರು ಬಿಡುಗಡೆ ಪ್ರಮಾಣದಲ್ಲಿ ಇಳಿಕೆ; ಮನೆಗಳನ್ನು ಸೇರಿದ ಹಾವು, ಚೇಳು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 18:20 IST
Last Updated 20 ಅಕ್ಟೋಬರ್ 2020, 18:20 IST
ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮುಳುಗಡೆ ಗ್ರಾಮ ಕೋನಾ ಹಿಪ್ಪರಗಾದಲ್ಲಿ ಪ್ರವಾಹದ ನೀರಿನಲ್ಲೇ ಮಂಗಳವಾರ ನಡೆದುಕೊಂಡು ಬಂದ ಗ್ರಾಮಸ್ಥರು
ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಮುಳುಗಡೆ ಗ್ರಾಮ ಕೋನಾ ಹಿಪ್ಪರಗಾದಲ್ಲಿ ಪ್ರವಾಹದ ನೀರಿನಲ್ಲೇ ಮಂಗಳವಾರ ನಡೆದುಕೊಂಡು ಬಂದ ಗ್ರಾಮಸ್ಥರು   

ಕಲಬುರ್ಗಿ: ಭೀಮಾ ನದಿಯ ಹರಿವಿನ ಮಟ್ಟ ಮಂಗಳವಾರ ಗಣನೀಯವಾಗಿ ತಗ್ಗಿದ್ದು, ಕಲಬುರ್ಗಿ ಜಿಲ್ಲೆಯಲ್ಲಿ ಹಲವು ಗ್ರಾಮಗಳನ್ನು ಆವರಿಸಿಕೊಂಡಿದ್ದ ಪ್ರವಾಹ ಇಳಿಮುಖವಾಗುತ್ತಿದೆ.

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಮುಂದುವರಿದಿದ್ದು,ಶಹಾಪುರ ತಾಲ್ಲೂಕಿನ ಹುರಸಗುಂಡಗಿ, ರೋಜಾ, ಹೊಸೂರ, ಅಣಬಿ ಗ್ರಾಮಗಳಿಗೆ ನೀರು ನುಗ್ಗಿ, ಸಾವಿರಾರು ಎಕರೆ ಜಮೀನು ಜಲಾವೃತ್ತವಾಗಿದೆ.

ಅಣಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತೆಗೆದಿರುವ ಕಾಳಜಿ ಕೇಂದ್ರದಲ್ಲಿ ಶೌಚಾಲಯ ಇಲ್ಲ. ಬಯಲೇ ಗತಿಯಾಗಿದೆ ಎಂದು ಅಲ್ಲಿದ್ದ ಸಂತ್ರಸ್ತರು ದೂರಿದರು.ಶಹಾಪುರ ತಾಲ್ಲೂಕಿನ ರೋಜಾ ಗ್ರಾಮದವರನ್ನು ಸ್ಥಳಾಂತರಿಸಿರುವ ಹೊಸೂರ ಗ್ರಾಮದ ಕಾಳಜಿ ಕೇಂದ್ರದಲ್ಲಿ ಸ್ನಾನಕ್ಕೂ ಸೌಲಭ್ಯ ಇಲ್ಲ ಎಂದು ಮಹಿಳೆಯರು ಅಲವತ್ತುಕೊಂಡರು.

ADVERTISEMENT

ಸೊನ್ನ ಬ್ಯಾರೇಜ್‌ ಹತ್ತಿರಮಂಗಳವಾರ ಮಧ್ಯಾಹ್ನದಿಂದ 1.78 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ. ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ರಾಯಚೂರು ಜಿಲ್ಲೆಯಲ್ಲಿಯೂ ಪ್ರವಾಹ ಭೀತಿ ದೂರವಾಗಿದೆ. ಕಲಬುರ್ಗಿ ನಗರ ಹಾಗೂ ಜಿಲ್ಲೆಯ ಹಲವೆಡೆ, ಕೊಪ್ಪಳ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.

ಮತ್ತೆ ಮಳೆ (ಹುಬ್ಬಳ್ಳಿ ವರದಿ): ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಮೇತ ಮಂಗಳವಾರ ಮಳೆಯಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಕೃಷ್ಣಾ, ಘಟಪ್ರಭಾ, ಭೀಮಾ ನದಿಗಳ ಪ್ರವಾಹ ಸ್ಥಿತಿ ಇಳಿಮುಖವಾಗಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಹಾಗೂ ಪರಿಹಾರ ಕಾರ್ಯಗಳು ಮುಂದುವರಿದಿವೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು–ಸಿಡಿಲು ಸಹಿತ ಜೋರು ಮಳೆ ಸುರಿದಿದೆ. ಗದಗ, ಹಾವೇರಿ, ಧಾರವಾಡ,ಚಿತ್ರದುರ್ಗ, ದಾವಣಗೆರೆ, ಮೈಸೂರು, ಹಾಸನ ಜಿಲ್ಲೆಯಲ್ಲೂ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.