ಬೆಂಗಳೂರು: ‘ಬೈಕ್ ಟ್ಯಾಕ್ಸಿ ಸೇವೆಯು ಅತ್ಯಂತ ಸುರಕ್ಷತೆಯಿಂದ ಕೂಡಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣ ಸಾಧನವಾಗಿದೆ’ ಎಂದು ಮಹಿಳಾ ಪ್ರಯಾಣಿಕರು ಹಾಗೂ ಚಾಲಕಿಯರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
‘ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯದಲ್ಲಿ ಮುಂದುವರಿಸಲು ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’, ‘ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ರ‍್ಯಾಪಿಡೊ)’ ಮತ್ತು ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ)’ ಕಂಪನಿಗಳು ಸಲ್ಲಿಸಿರುವ ರಿಟ್ ಮೇಲ್ಮನವಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಹಿಳಾ ಪ್ರಯಾಣಿಕರು ಮತ್ತು ಚಾಲಕಿಯರ ಪರ ಸಲ್ಲಿಸಲಾದ ಮಧ್ಯಂತರ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲೆ ಜಯನಾ ಕೊಠಾರಿ ವಾದ ಮಂಡಿಸಿ, ‘ಮಹಿಳೆಯರಿಗೆ ಈ ಸೇವೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಸರ್ಕಾರ ಅಸುರಕ್ಷತೆಯ ನೆಪವೊಡ್ಡಿ ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿದೆ. ಆದರೆ, ಪ್ರತಿನಿತ್ಯ ಪ್ರಯಾಣಿಸುವವರಿಗೆ ಬೈಕ್ ಟ್ಯಾಕ್ಸಿ ಸೇವೆ ಅತ್ಯಂತ ಸುರಕ್ಷತೆಯಿಂದ ಕೂಡಿದ್ದು, ಅನುಕೂಲಕರ ಮತ್ತು ಕೈಗೆಟುಕುವ ಪ್ರಯಾಣ ಸಾಧನವಾಗಿದೆ’ ಎಂದರು.
‘ಬೇರೆ ರಾಜ್ಯಗಳಲ್ಲಿ ಬೈಕರ್‌ಗಳಿಗೆ ಅರ್ಹತಾ ಪೂರ್ವ ಪರೀಕ್ಷೆ ನಿಗದಿಪಡಿಸಿ ಅವರ ಹಿನ್ನೆಲೆ ಪರಿಶೀಲಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ರಾತ್ರಿ ವೇಳೆ ಸೀಮಿತ ಬೈಕ್ ಟ್ಯಾಕ್ಸಿ ಸೇವೆ ನೀಡಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಒದಗಿಸಬೇಕು ಎಂಬ ಮಹಿಳೆಯರ ಮನವಿಗೆ ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ಅಗ್ರಿಗೇಟರ್ ನಿಯಮ ಮತ್ತು ಮಾರ್ಗಸೂಚಿಗಳನ್ನು ಗಮನಿಸಿದಾಗ ಇದೊಂದು ಸುರಕ್ಷತಾ ಸಾರಿಗೆಯ ವಿಧಾನವಾಗಿದೆ’ ಎಂದು ವಿವರಿಸಿದರು.
‘ಸ್ವತಂತ್ರ ಸಂಸ್ಥೆಗಳು ನಡೆಸಿರುವ ರಾಷ್ಟ್ರೀಯ ಮಟ್ಟದ ವರದಿಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಶಿಫಾರಸು ಮಾಡಲಾಗಿದೆ. ಕೈಗೆಟಕುವ ದರ ಹೊಂದಿರುವುದೂ ಇದರ ವಿಶೇಷ’ ಎಂದರು.
ಅಡ್ಡಗಾಲು: ರ‍್ಯಾಪಿಡೊ ಮಾತೃ ಸಂಸ್ಥೆ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಬೈಕ್ ಸೇವೆ ನಿರ್ಬಂಧಿಸಲು ಮಹಿಳೆಯರ ಸುರಕ್ಷತೆಯ ಅಂಶವನ್ನು ಮುಂದು ಮಾಡಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಆಟೊ ರಿಕ್ಷಾ ಚಾಲಕರ ಒಕ್ಕೂಟ ಅಡ್ಡಗಾಲು ಹಾಕುತ್ತಿದೆ. ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿರುವ ಕಾರಣ ಬೆಂಗಳೂರು ಮಹಾನಗರದಲ್ಲಿ ಶೇ 18ರಷ್ಟು ಸಂಚಾರ ದಟ್ಟಣೆ ಹೆಚ್ಚಾಗಿದೆ’ ಎಂದು ಆರೋಪಿಸಿದರು.
‘ಈ ಹಿಂದೆ ತಮಿಳುನಾಡು ರಾಜ್ಯವೂ ಬೈಕ್ ಟ್ಯಾಕ್ಸಿ ನಿಷೇಧ ಮಾಡಿತ್ತು. ಈಗ ಅನುಮತಿ ನೀಡಿದೆ. ಅಂತೆಯೇ, ಕೇರಳ ಕೂಡಾ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ’ ಎಂಬ ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.
‘ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಅಂಚಿನವರೆಗೆ ಸಂಪರ್ಕ ಕಲ್ಪಿಸುವ ಯಾವುದೇ ಸಾರಿಗೆ ಸೇವೆಗಳು ವಿರಳವಾಗಿವೆ. ಜಪಾನ್‌ನಂತಹ ದೇಶಗಳಲ್ಲಿ ಹಲವು ಮೆಟ್ರೊ ಮಾರ್ಗಗಳಿವೆ. ಆದರೆ, ಬೆಂಗಳೂರು ಮಹಾನಗರದ ಪರಿಸ್ಥಿತಿ ಬೇರೆಯದೇ ಆಗಿದ್ದು, ಹಲವು ಮೆಟ್ರೊ ಮಾರ್ಗ ರೂಪಿಸಿದರೂ ಸಂಪರ್ಕ ಅಸಾಧ್ಯ ಎನ್ನುವಂತಿದೆ’ ಎಂದು ವಿವರಿಸಿದರು.
ರ‍್ಯಾಪಿಡೊ ಕಂಪನಿ ಪರ ಹೈಕೋರ್ಟ್ ವಕೀಲ ಎ.ವಿ.ನಿಶಾಂತ್ ವಕಾಲತ್ತು ವಹಿಸಿದ್ದಾರೆ. ಓಲಾ, ಉಬರ್ ಮತ್ತು ರಾಜ್ಯ ಸರ್ಕಾರದ ಪರ ವಾದ ಆಲಿಸಬೇಕಿರುವ ನ್ಯಾಯಪೀಠ ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಿದೆ.
‘ಮೋಟಾರು ವಾಹನ ಕಾಯ್ದೆ–1988ರ ಕಲಂ 93ರ ಅನುಸಾರ ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರ‍್ಯಾಪಿಡೊಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು’ ಎಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.