ಬೆಂಗಳೂರು: ನೂತನವಾಗಿ ರೂಪಿಸಲು ಹೊರಟಿರುವ ಜೈವಿಕ ಇಂಧನ ನೀತಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಪ್ರಾಯೋಗಿಕ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಸೂಚಿಸಿದರು.
ಮಂಡಳಿಯ 10ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ವಿಧಾನಸೌಧದಲ್ಲಿ ಬುಧವಾರ ನಡೆದಿದ್ದು, ನೂತನ ಜೈವಿಕ ಇಂಧನ ನೀತಿಯ ಬಗ್ಗೆ ಚರ್ಚಿಸಲಾಯಿತು.
‘ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಹಲವು ಉದ್ಯಮಗಳು ಮುಂದೆ ಬರುತ್ತಿದ್ದು, ಮೂಲಸೌಕರ್ಯ ಮತ್ತು ಅಗತ್ಯ ಅನುಮತಿಗಳನ್ನು ಒದಗಿಸುವ ಕೆಲಸ ಮಾಡಬೇಕು. ಈ ಮೂಲಕ ಲಕ್ಷ ಕೋಟಿಗೂ ಹೆಚ್ಚು ಬಂಡವಾಳವನ್ನು ಆಕರ್ಷಿಸಬಹುದು’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಎಲ್. ಅವರು ಸಭೆಗೆ ವಿವರಿಸಿದರು.
ಪ್ರಿಯಾಂಕ್ ಖರ್ಗೆ, ‘ಇಂದಿನ ಅಗತ್ಯಗಳಿಗೆ ತಕ್ಕಹಾಗೆ ನೀತಿಯನ್ನು ರೂಪಿಸಬೇಕು. ಆಗ ಮಾತ್ರ ಅದರಿಂದ ಹೆಚ್ಚು ಉಪಯೋಗವಾಗಲಿದೆ. ಮಂಡಳಿಯು ಈ ಬಗ್ಗೆ ಹೆಚ್ಚು ಗಮನ ನೀಡಲಿ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು’ ಎಂದರು.
ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ‘ಕೃಷಿ ತ್ಯಾಜ್ಯವನ್ನು ಸಂಗ್ರಹಿಸಿ, ಅವನ್ನು ಜೈವಿಕ ಇಂಧನ ಉತ್ಪಾದನಾ ಘಟಕಗಳಿಗೆ ಪೂರೈಸುವ ಸಲುವಾಗಿ ಗ್ರಾಮೀಣ ಪ್ರದೇಶದಲ್ಲಿ ಬಯೋಮಾಸ್ ಬಂಕ್‌ಗಳನ್ನು ಸ್ಥಾಪಿಸಲು ಕೃಷಿ ಇಲಾಖೆ ನೆರವು ನೀಡಲಿದೆ’ ಎಂದರು.
ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ, ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ಬಾಲಕೃಷ್ಣಗೌಡ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.