ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಕುಸಿದಿರುವುದನ್ನು ಭಾರತೀಯ ಚುನಾವಣಾ ಆಯೋಗದ ದತ್ತಾಂಶ ವಿಶ್ಲೇಷಣೆಯು ಬಹಿರಂಗಪಡಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ದತ್ತಾಂಶವನ್ನು ಆಯೋಗವು ವಿಶ್ಲೇಷಣೆಗೆ ಒಳಪಡಿಸಿದೆ. ಈ ವೇಳೆ, ‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹದಿನೆಂಟು ತುಂಬಿದವರ ಸಂಖ್ಯೆ ಅಸಾಧಾರಣವಾಗಿ ಹೆಚ್ಚಾಗಿದ್ದು, ಅದಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಈ ವ್ಯತ್ಯಾಸವು ಜನನ ಪ್ರಮಾಣ ಕಡಿಮೆ ಆಗಿರುವುದನ್ನು ಸೂಚಿಸುತ್ತಿದ್ದು, ಇದು ಸಂಭವನೀಯ ಜನಸಂಖ್ಯಾ ಬಿಕ್ಕಟ್ಟಿನ ಸಂಕೇತ’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘18–19 ವರ್ಷ ವಯಸ್ಸಿನ ಯುವತಿಯರ ಸಂಖ್ಯೆ ಕಡಿಮೆ ಇದೆಯೇ ಎಂದು ಪರಿಶೀಲಿಸಲು ನಾವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ನೆರವು ಪಡೆದೆವು. ಅಲ್ಲಿ 0-5 ವರ್ಷ ವಯಸ್ಸಿನವರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದು ನಮಗೆ ತಿಳಿದುಬಂತು’ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಅನುಪಾತ (ಇಪಿಆರ್) 70.16 ಆಗಿದೆ. ಇದು ಅಂದಾಜು ಜನಸಂಖ್ಯೆಗೆ ಅನುಗುಣವಾದ ನೋಂದಾಯಿತ ಮತದಾರರ ಒಟ್ಟು ಸಂಖ್ಯೆ. ದತ್ತಾಂಶದ ಪ್ರಕಾರ 31 ಜಿಲ್ಲೆಗಳ ಪೈಕಿ, 24 ಜಿಲ್ಲೆಗಳಲ್ಲಿ ಈ ಅನುಪಾತವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಈ ಅನುಪಾತವು ತುಂಬಾ ಹೆಚ್ಚಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯ ಸಮಯದಲ್ಲಿ ಇದು ಬಹಿರಂಗವಾಗಿದೆ. ಈ ವಿಚಾರವು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ನೇತೃತ್ವದ ತಂಡದ ಅಚ್ಚರಿಗೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ 85.84 ಇಪಿಆರ್ ಇದೆ. ಇದರರ್ಥ 100ರಲ್ಲಿ 85 ಜನರು 18 ವರ್ಷ ದಾಟಿದವರು. ಜಿಲ್ಲೆಯ ಒಟ್ಟು ಅಂದಾಜು ಜನಸಂಖ್ಯೆ 11.33 ಲಕ್ಷ, ಅದರಲ್ಲಿ 9.73 ಲಕ್ಷ ಜನರು ಮತದಾರರಾಗಿ ಗುರುತಿಸಿಕೊಂಡಿದ್ದಾರೆ.
‘ಪಡಿತರ ಚೀಟಿಯಂತಹ ವಿವಿಧ ದಾಖಲೆಗಳ ಮೂಲಕ ಈ ಅನುಪಾತವನ್ನು ನಾವು ಪರಿಶೀಲಿಸಿದ್ದೇವೆ. ಜನನ ಪ್ರಮಾಣ ಕಡಿಮೆ ಆಗುತ್ತಿರುವುದನ್ನು ಇದು ಖಚಿತಪಡಿಸಿದೆ. ಜನಸಂಖ್ಯಾ ಬೆಳವಣಿಗೆ ನಕಾರಾತ್ಮಕವಾಗಿರುವುದರ ಸೂಚನೆಯಿದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕೊಡಗು ಜಿಲ್ಲೆ 84.25ರ ಇಪಿಎಆರ್ ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಂಡ್ಯ (83.72), ಉಡುಪಿ (83.07), ಹಾಸನ (82.82) ಮತ್ತು ತುಮಕೂರು (81.78) ಇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯ ಇಪಿಆರ್ 76.51. ಇದು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಇಪಿಆರ್ 97.74 ಇರುವುದು ಬೆರಗು ಮೂಡಿಸುತ್ತದೆ.
ಬೆಂಗಳೂರು ನಗರ ಮತ್ತು ನಗರದ ಪುರಸಭೆಯ ಪ್ರದೇಶದಲ್ಲಿ ಇಪಿಆರ್ ಅತ್ಯಂತ ಕಡಿಮೆಯಾಗಿದ್ದು, 51.78 ಮತ್ತು 63.21ರ ನಡುವೆ ಇದೆ.
ಮತದಾರರ ಪಟ್ಟಿಯ ದತ್ತಾಂಶವು ಲಿಂಗ ಅನುಪಾತದಲ್ಲಿನ ಸಮಸ್ಯೆಗಳನ್ನು ಕೂಡಾ ಸೂಚಿಸುತ್ತದೆ. ಒಟ್ಟಾರೆಯಾಗಿ, ಕರ್ನಾಟಕದ ಮತದಾರರಲ್ಲಿ ಲಿಂಗ ಅನುಪಾತವು 1,000 ಪುರುಷರಿಗೆ 1,003 ಮಹಿಳೆಯರಿದ್ದಾರೆ. ಆದರೆ, ಮೊದಲ ಬಾರಿಗೆ ಮತದಾರರಾಗುವ (18-19 ವಯೋಮಾನದವರು) ವಿಷಯಕ್ಕೆ ಬಂದಾಗ, ಅನುಪಾತವು 892ಕ್ಕೆ ಇಳಿಯುತ್ತದೆ.
‘ಕರ್ನಾಟಕದಾದ್ಯಂತ ಫಲವಂತಿಕೆ ದರ ಕಡಿಮೆಯಾಗಿದೆ ಎಂಬುದು ನಿಜ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಜನಸಂಖ್ಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಲೇಖಾ ಸುಬಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.