ADVERTISEMENT

ರಾಹುಲ್‌ ಸರ್ವಾಧಿಕಾರಿ ಧೋರಣೆ: ಬಿಜೆಪಿ ಕಿಡಿ

ಮಾನ್ಯತಾದಲ್ಲಿ ಟೆಕಿಗಳ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ: ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:57 IST
Last Updated 19 ಮಾರ್ಚ್ 2019, 19:57 IST
   

ಬೆಂಗಳೂರು: ‘ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಮೊಮ್ಮಗ ರಾಹುಲ್‌ ಗಾಂಧಿ ಅದೇ ಹಾದಿಯಲ್ಲಿ ನಡೆಯುತ್ತಿರುವುದಕ್ಕೆ ಮಾನ್ಯತಾ ಟೆಕ್ ಪಾರ್ಕ್‌ನ ಘಟನೆಯೇ ಸಾಕ್ಷಿ. ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಆರ್‌. ಅಶೋಕ ಕಿಡಿಕಾರಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗುವುದು ಅಪರಾಧವಾಗಿದೆ. ವಾಕ್‌ ಸ್ವಾತಂತ್ರ್ಯವನ್ನು ಕಾಪಾಡುವವರು ನಾವೇ ಎಂದು ಕಾಂಗ್ರೆಸ್‌ ನಾಯಕರು ಬೊಗಳೆ ಬಿಡುತ್ತಿದ್ದಾರೆ. ಆದರೆ, ಪ್ರಧಾನಿ ಪರ ಘೋಷಣೆ ಕೂಗಿದ ಯುವಕರನ್ನು ಮೈತ್ರಿ ಸರ್ಕಾರ ಬಂಧಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಹುಲ್‌ ಗಾಂಧಿ ಅವರನ್ನು ರಾಜ್ಯದ ಯುವಜನತೆ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂಬುದು ಸಾಬೀತಾಗಿದೆ. ಪ್ರತಿ ಭಾಷಣದಲ್ಲಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಜನರ ದಾರಿ ತಪ್ಪಿಸುವ ಯತ್ನದಲ್ಲಿ ರಾಹುಲ್ ತೊಡಗಿದ್ದಾರೆ. ಘೋಷಣೆ ಕೂಗುವ ಮೂಲಕ ತಮ್ಮ ಆಯ್ಕೆ ಯಾವುದು ಎಂಬುದನ್ನು ಯುವಜನರು ಬಹಿರಂಗಪಡಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಕಾಂಗ್ರೆಸ್‌ ನಾಯಕರು ಪೈಪೋಟಿಯ ಮೇಲೆ ಮೋದಿ ಅವರನ್ನು ನಿಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಭಯೋತ್ಪಾದಕ, ಹಿಟ್ಲರ್‌, ಕೊಲೆ ಮಾಡಿ ಮುಂತಾದ ಮುದ್ರಿಸಲು ಆಗದ ಭಾಷೆಯನ್ನು ಬಳಸುತ್ತಿದ್ದಾರೆ. ರಾಜ್ಯ ಚುನಾವಣಾ ಕೂಡಲೇ ಮಧ್ಯಪ್ರವೇಶಿಸಿ ಕಾಂಗ್ರೆಸ್‌ ನಾಯಕರ ಮಾತಿಗೆ ಕಡಿವಾಣ ಹಾಕಬೇಕು’ ಎಂದು ಅವರು ಒತ್ತಾಯಿಸಿದರು.

ದೂರು: ಐಟಿ ಉದ್ಯೋಗಿಗಳ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆರ್‌. ಅಶೋಕ್ ನೇತೃತ್ವದ ನಿಯೋಗವು ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿತು. ನಿಯೋಗದಲ್ಲಿ ಸಹ ವಕ್ತಾರರಾದ ಎ.ಎಚ್‌.ಆನಂದ್‌, ಎಸ್.ಪ್ರಕಾಶ್‌, ಎಸ್‌.ಹರೀಶ್‌, ಬಾಲಾಜಿ ಶ್ರೀನಿವಾಸ್‌ ಇದ್ದರು.

* ಹಲ್ಲೆಗೊಳಗಾದ ಹಾಗೂ ಬಂಧನಕ್ಕೆ ಒಳಗಾದ ಐಟಿ ಉದ್ಯೋಗಿಗಳಿಗೆ ಪಕ್ಷ ಕಾನೂನು ನೆರವು ನೀಡಲಿದೆ.
-ಆರ್‌.ಅಶೋಕ್‌, ಬಿಜೆಪಿ ಶಾಸಕ

‘ತೀರಾ ಕೆಟ್ಟ ನಡವಳಿಕೆ’

‘ರಾಹುಲ್‌ ಗಾಂಧಿ ಕಾರ್ಯಕ್ರಮದ ವೇಳೆ ಆರ್‌ಎಸ್‌ಎಸ್‌, ಬಿಜೆಪಿ ಬೆಂಬಲಿಗರು ಈ ರೀತಿ ವರ್ತಿಸಿರುವುದು ತೀರಾ ಕೆಟ್ಟ ನಡವಳಿಕೆ. ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ರಾಹುಲ್‌ ಪರ ಜೈಕಾರ ಹಾಕಿದರೆ ಹೇಗಿರುತ್ತದೆ? ಈ ರೀತಿ ವರ್ತಿಸುವುದು ಶೋಭೆ ತರುವ ವಿಷಯವಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

‘ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಘಟನೆಯ ಸಂಬಂಧ ಯಾರನ್ನೂ ಬಂಧಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿದೆ. ಆದರೆ, ಘನತೆಯಿಂದ ವರ್ತಿಸಬೇಕಾದವರು ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಪಿಯನ್‌ಗಳೇ ಎಲ್ಲಿದ್ದೀರಿ? : ಅಮಿತ್‌ ಶಾ

‘ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಂಪಿಯನ್‌ಗಳೇ ಎಲ್ಲಿದ್ದೀರಿ?’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮೋದಿ ಪರ ಘೋಷಣೆ ಕೂಗಿದ ಟೆಕಿಗಳನ್ನು ಬಂಧಿಸಿದ್ದಕ್ಕೆ ಶಾ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

‘ಭಾರತವನ್ನು ತುಂಡು ತುಂಡು ಮಾಡುತ್ತೇವೆ ಎಂದ ಗ್ಯಾಂಗ್‌ ಅನ್ನು ಅಪ್ಪಿಕೊಳ್ಳುತ್ತೀರಿ, ಮೋದಿ ಪರ ಶಾಂತಿಯುತವಾಗಿ ಘೋಷಣೆ ಕೂಗಿದವರನ್ನು ಬಂಧಿಸುತ್ತೀರಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಂಪಿಯನ್‌ಗಳೇ ಎಲ್ಲಿದ್ದೀರಿ? ಕಾಂಗ್ರೆಸ್‌ನ ಯುವರಾಜನೇ (ರಾಹುಲ್ ಗಾಂಧಿ), ದೇಶದ ಯುವಜನರನ್ನು ಬೆದರಿಸುವ ಈ ತಂತ್ರ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಆ ಯುವಜನರು ನಿಮ್ಮ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಅವರನ್ನು ಬೆದರಿಸುವುದನ್ನು ನಿಲ್ಲಿಸಿ’ ಎಂದು ಶಾ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.