ವಿಧಾನಸಭೆ
ಬೆಂಗಳೂರು: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬೇಸರ ನೀಗಲು ಭಜನೆ ಮತ್ತು ಹರಟೆಯಲ್ಲಿ ತೊಡಗಿದ್ದರು.
ಮೊಗಸಾಲೆಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಸರ್ಕಾರ ಚರ್ಚೆಗೆ ಅವಕಾಶ ನೀಡದ ಕಾರಣ ಸಭಾಧ್ಯಕ್ಷರ ಊಟವನ್ನು ನಿರಾಕರಿಸಿದ ಬಿಜೆಪಿ ಸದಸ್ಯರು, ತಾವೇ ಊಟದ ವ್ಯವಸ್ಥೆಯನ್ನು ಮಾಡಿಕೊಂಡರು. ರಾತ್ರಿ ಮಲಗಲು ದಿಂಬು ಮತ್ತು ಹೊದಿಕೆಗಳನ್ನು ತರಿಸಿಕೊಂಡರು.
ಮಾತಿನ ಚಕಮಕಿ:
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮತ್ತು ಪೊಲೀಸ್ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಧರಣಿ ವೇಳೆ ವಿಧಾನಸಭೆಯಿಂದ ಹೊರಹೋಗಿದ್ದ ಧೀರಜ್ ಮುನಿರಾಜು ಅವರು ಟಿ–ಶರ್ಟ್ ಧರಿಸಿ ವಾಪಸಾಗಿದ್ದರು. ಆದರೆ ಅವರು ಶಾಸಕ ಎಂಬುದನ್ನು ಗುರುತಿಸದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ, ಹೊರ ಹೋಗುವಂತೆ ಏಕವಚನದಲ್ಲಿ ಸೂಚಿಸಿದರು ಎನ್ನಲಾಗಿದೆ.
ಡಿಸಿಪಿ ಅವರ ನಡೆಗೆ ಧೀರಜ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ಆನಂತರ ಧೀರಜ್ ಅವರು ಶಾಸಕ ಎಂಬುದು ಗೊತ್ತಾದ ನಂತರ, ಡಿಸಿಪಿ ಕರಿಬಸವನಗೌಡ ಅವರು ಕ್ಷಮೆ ಕೇಳಿದರು ಎನ್ನಲಾಗಿದೆ.
ಪೊಲೀಸ್ ಅಧಿಕಾರಿ ವರ್ತನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರನ್ನು ಬಿಡುತ್ತೀರಿ. ಆದರೆ, ಶಾಸಕರನ್ನು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಪ್ರತಿಭಟನಾನಿರತ ಶಾಸಕರನ್ನು ಭೇಟಿಮಾಡಿ, ಯೋಗಕ್ಷೇಮ ವಿಚಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.