ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಶಾಸಕರ ಸಭೆಗೆ ಉಪ ಮುಖ್ಯಮಂತ್ರಿಗೆ ಆಹ್ವಾನ ಇಲ್ಲ. ಇದು ಇಬ್ಬರ ಮಧ್ಯದ ಗುಂಪುಗಾರಿಕೆಗೆ ಸಾಕ್ಷಿ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಬುಧವಾರ ಪ್ರತ್ಯೇಕವಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ಸಿದ್ದರಾಮಯ್ಯ ತಮ್ಮ ಶಕ್ತಿ ತೋರಿಸಲು ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿಲ್ಲ. ಸಿದ್ದರಾಮಯ್ಯ ಎಲ್ಲ ವರ್ಗಗಳ ನಾಯಕರಾಗಿ ಈಗ ಉಳಿದಿಲ್ಲ. ಅವರು ಸ್ವಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಶಾಸಕರ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಅವರ ವಿಶ್ವಾಸ ಮರಳಿಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ಮಧ್ಯೆಯೂ ವ್ಯತ್ಯಾಸ ಕಾಣಿಸುತ್ತಿದೆ. ರಷ್ಯಾ–ಉಕ್ರೇನ್ ರೀತಿ ಕಾಂಗ್ರೆಸ್‌ನಲ್ಲೂ ಯುದ್ಧ ಪ್ರಾರಂಭವಾಗಲಿದೆ ಎಂದಿದ್ದಾರೆ.
ಶಿವಕುಮಾರ್ ಅವರಿಗೆ ಕಾಂಗ್ರೆಸ್ ಶಾಸಕರ ಬೆಂಬಲ ಇಲ್ಲವೆಂದು ಸಿದ್ದರಾಮಯ್ಯ ಈಚೆಗೆ ಘೋಷಣೆ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಸಭೆಗೆ ಕರೆಯದೇ ಕಡೆಗಣಿಸಿದ್ದಾರೆ. ಎರಡು ವರ್ಷಗಳಿಂದ ನಯಾಪೈಸೆ ಕೊಡದ ಮುಖ್ಯಮಂತ್ರಿ ಪ್ರತಿ ಕ್ಷೇತ್ರಕ್ಕೂ ₹50 ಕೋಟಿ ಕೊಡುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.