ADVERTISEMENT

ಸರ್ಕಾರಿ ಬಂಗಲೆಗಾಗಿ ಪ್ರತಿಪಕ್ಷ ನಾಯಕನ ಸ್ಥಾನ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 16:58 IST
Last Updated 17 ಅಕ್ಟೋಬರ್ 2021, 16:58 IST
‘ಸಿದ್ದರಾಮಯ್ಯ
‘ಸಿದ್ದರಾಮಯ್ಯ   

ಬೆಂಗಳೂರು:‘ಸಿದ್ದರಾಮಯ್ಯ ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟದಿಂದ ಪ್ರತಿಪಕ್ಷ ನಾಯಕನ ಸ್ಥಾನವನ್ನು ಪಟ್ಟು ಹಿಡಿದು ಪಡೆದಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕ ಟೀಕಿಸಿದೆ.

ಉಪ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಕುರಿತು ಏಕವಚನದಲ್ಲಿ ಮಾತನಾಡಿರುವುದಕ್ಕೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕ, ‘ನಾನು ಗ್ರಾಮೀಣ ಹಿನ್ನೆಲೆಯವನು ಎಂದು ಹೇಳುತ್ತೀರಿ. ದೇಶದ ಪ್ರಧಾನಿಯ ಕುರಿತು ಏಕವಚನದಲ್ಲಿ ಮಾತನಾಡುತ್ತೀರಿ. ಏಕವಚನ ಪ್ರಯೋಗ ಗ್ರಾಮೀಣ ಸಂಸ್ಕಾರವೆ? ಸರ್ಕಾರಿ ಬಂಗಲೆಗಾಗಿ ಪ್ರತಿಪಕ್ಷ ನಾಯಕನ ಸ್ಥಾನ ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’ ಎಂದಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತೂ ಪರೋಕ್ಷವಾಗಿ ಟೀಕಿಸಿರುವ ಬಿಜೆಪಿ, ‘ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿ ಆಗಿದ್ದರು ಎಂಬ ಕಾರಣಕ್ಕೆ ತಾನೂ ಪ್ರಧಾನಿ ಆಗಬೇಕೆಂದು ಒಬ್ಬ ಹೆಬ್ಬೆಟ್ಟು ಗಿರಾಕಿ ಕನಸು ಕಾಣುತ್ತಿದ್ದಾನೆ. ಆತನ ಯೋಗ್ಯತೆ, ಅರ್ಹತೆ ಏನು ಎಂಬುದನ್ನು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿ ಬಗ್ಗೆಯೂ ಹೀಗೆಯೇ ಮಾತನಾಡುತ್ತೀರಾ’ ಎಂದು ಪ್ರಶ್ನಿಸಿದೆ.

ADVERTISEMENT

ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಗುತ್ತಿಗೆದಾರರ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕುರಿತು ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಡಿದ್ದ ಟ್ವೀಟ್‌ಗೂ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಶಾಸಕ ಕೆ.ಜೆ. ಜಾರ್ಜ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.