ಬೆಂಗಳೂರು: ಇವಿಎಂಗಳ ಮೂಲಕ ನಡೆದ ಚುನಾವಣೆಯಲ್ಲೇ ಗೆದ್ದಿರುವ ಕಾಂಗ್ರೆಸ್, ಈಗ ಅದನ್ನೇ ಪ್ರಶ್ನಿಸುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಮೋದಿ ಅವರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ದೇಶದ ಜನ ಒಪ್ಪಿದ್ದಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಒಪ್ಪಲಾಗುತ್ತಿಲ್ಲ. ಹೀಗಾಗಿಯೇ ಇವಿಎಂ ಅನ್ನು ದೂರುತ್ತಿದ್ದಾರೆ’ ಎಂದರು.
‘ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರುಗಳಿಗೆ ಇವಿಎಂ ಕುರಿತಾಗಿ ಅಪನಂಬಿಕೆ ಬಂದಿದ್ದು ಏಕೆ? ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು ಹೇಗೆ? ಆಗ ಇವಿಎಂ ಸಮಸ್ಯೆ ಇರಲಿಲ್ಲವೇ. ಲೋಕಸಭಾ ಚುನಾವಣೆಯಲ್ಲಿ ಸತತ ಸೋಲಿನಿಂದ ಹತಾಶರಾಗಿರುವ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಬ್ಯಾಲಟ್ ಬಳಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬ್ಯಾಲಟ್ ಪೇಪರ್‌ಗೆ ಬಿಜೆಪಿ ಹೆದರುವುದಿಲ್ಲ. ಸತತ ಮೂರು ಬಾರಿ ಗೆದ್ದಿದ್ದೇವೆ. ದೇಶದ ಜನರೇ ನಮ್ಮನ್ನು ಆರಿಸಿರುವಾಗ ಯಾವುದಕ್ಕೂ ಹೆದರಬೇಕಾಗಿಲ್ಲ. ಮೋದಿ ಅವರು ಚುನಾವಣೆಗಳಲ್ಲಿ ಹಣ–ಸಮಯ ವ್ಯರ್ಥವಾಗಬಾರದು ಎಂದು ‘ಒಂದು ದೇಶ–ಒಂದು ಚುನಾವಣೆ’ ಜಾರಿಗೆ ತರಲು ಹೊರಟಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಪುರಾತನ ಕಾಲಕ್ಕೆ ಮರಳುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.