
ಬೆಂಗಳೂರು: ಸಚಿವರಾದ ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ ಆಣತಿಯಂತೆ ಲೋಕಭವನ ಮತ್ತು ಆರ್‌ಎಸ್‌ಎಸ್‌ನ ಕಚೇರಿ ಕೇಶವಕೃಪಾದ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಬಿಜೆಪಿ ಸದಸ್ಯರು ಕದ್ದಾಲಿಕೆ ವಿಷಯ ಪ್ರಸ್ತಾಪಿಸಿದರು.
‘ವಂದನೆಯ ಬದಲಿಗೆ ಖಂಡನಾ ನಿರ್ಣಯದ ಮೂಲಕ ರಾಜ್ಯಪಾಲರಿಗೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಈ ಕುರಿತು ಸರ್ಕಾರ ಕ್ಷಮೆ ಯಾಚಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಟ್ಟು ಹಿಡಿದರು. ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.
ಆಗ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ದೆಹಲಿಯಿಂದ ಬರುವ ದೂರವಾಣಿ ಕರೆಗಳ ನಿರ್ದೇಶನದಂತೆಯೇ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಪೂರ್ತಿ ಭಾಷಣ ಓದಲಿಲ್ಲ’ ಎಂದರು.
ಅವರ ಮಾತನ್ನೇ ಗಟ್ಟಿಯಾಗಿ ಹಿಡಿದುಕೊಂಡ ಬಿಜೆಪಿ ಸದಸ್ಯರು, ‘ಹಾಗಿದ್ದರೆ ನೀವು ಲೋಕಭವನದ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದೀರಾ? ದೆಹಲಿಯಿಂದ ಎಷ್ಟು ಕರೆಗಳು ಬಂದಿವೆ ಮತ್ತು ಯಾವ ನಿರ್ದೇಶನ ನೀಡಿದ್ದಾರೆ ಎಂಬುದು ನಿಮಗೆ ಗೊತ್ತಿರಬೇಕು. ಅವುಗಳ ವಿವರಗಳನ್ನು ಬಹಿರಂಗಪಡಿಸಿ ಎಂದು ಪಟ್ಟು ಹಿಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.