ADVERTISEMENT

ಪಕ್ಷ ಕಟ್ಟಿದರಷ್ಟೇ ಸ್ಥಾನಮಾನ: ನಾ.ತಿಪ್ಪೇಸ್ವಾಮಿ

39 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 3:59 IST
Last Updated 19 ಜೂನ್ 2025, 3:59 IST
39 ಸಂಘಟನಾತ್ಮಕ ಜಿಲ್ಲೆಗಳ ಅಭಿನಂದನಾ ಸಮಾರಂಭ ಭಾಗವಹಿಸಿದ್ದ ಜಿಲ್ಲಾ ಅಧ್ಯಕ್ಷರ ಜತೆ ರಾಜ್ಯ ಪದಾಧಿಕಾರಿಗಳು
39 ಸಂಘಟನಾತ್ಮಕ ಜಿಲ್ಲೆಗಳ ಅಭಿನಂದನಾ ಸಮಾರಂಭ ಭಾಗವಹಿಸಿದ್ದ ಜಿಲ್ಲಾ ಅಧ್ಯಕ್ಷರ ಜತೆ ರಾಜ್ಯ ಪದಾಧಿಕಾರಿಗಳು   

ಬೆಂಗಳೂರು:‘ಕೇವಲ ಅಧಿಕಾರಕ್ಕಾಗಿ ಹವಣಿಸುವವರಿಗೆ ಪಕ್ಷದಲ್ಲಿ, ಸಂಘಟನೆಯಲ್ಲಿ ಸ್ಥಾನವಿಲ್ಲ. ಸಂಘಟನೆಗೆ ಒತ್ತು ನೀಡದೆ ಕೇವಲ ರಾಜಕೀಯ, ವ್ಯವಹಾರಗಳನ್ನಷ್ಟೇ ನಡೆಸಿಕೊಂಡು ಇರುತ್ತೇವೆ ಎಂಬುವವರಿಗೆ ಯಾವುದೇ ಅವಕಾಶ ಮತ್ತು ಸ್ಥಾನಮಾನ ಸಿಗುವುದಿಲ್ಲ’ ಎಂದು ಆರೆಸ್ಸೆಸ್‌ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹೇಳಿದ್ದಾರೆ.

ಜಗನ್ನಾಥ ಭವನದಲ್ಲಿ ಬುಧವಾರ ನಡೆದ 39 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಪಕ್ಷದ ಅತ್ಯಂತ ಹಿರಿಯ ನಾಯಕರು ಪಕ್ಷದಲ್ಲಿ ಅಧಿಕಾರದಲ್ಲಿ ಇರಲಿ, ಬಿಡಲಿ ಪಕ್ಷದ ಕೆಲಸದಿಂದ ವಿಮುಖರಾಗುತ್ತಿರಲಿಲ್ಲ. ಪಕ್ಷದ ಸಂಘಟನೆ ಜವಾಬ್ದಾರಿಯೇ ಬಹುದೊಡ್ಡ ಹುದ್ದೆ ಎಂದು ಭಾವಿಸಿದ್ದರು’ ಎಂದು ಅವರು ತಿಳಿಸಿದರು.

‘ದೇಶದಲ್ಲಿ ಬಿಜೆಪಿಯಿಂದ ಬೆರಳೆಣಿಕೆ ಸಂಸದರು ಗೆಲ್ಲುವ ಸಂದರ್ಭದಲ್ಲೂ ಪಕ್ಷದ ಸಂಘಟನೆಯೇ ಮೂಲ ಕರ್ತವ್ಯ ಎಂದು ಅಟಲ್‌ ಬಿಹಾರಿ ವಾಜಪೇಯಿ, ಅಡ್ವಾಣಿ ಅಂತಹವರು ಶ್ರಮಿಸುತ್ತಿದ್ದರು. ಚುನಾವಣೆಯಲ್ಲಿ ಸೋತರೂ ಪಕ್ಷದ ಕೆಲಸದಿಂದ ದೂರ ಸರಿಯಲಿಲ್ಲ. ಅಂತಹ ಹಿರಿಯರ ಶ್ರಮ ಮತ್ತು ಬದ್ಧತೆ ಕಾರಣ ಇಂದು ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ’ ಎಂದರು.

ADVERTISEMENT

ಸಂಘಟನೆಗೆ ಜಿಲ್ಲಾ ಅಧ್ಯಕ್ಷರಿಗೆ ಸೂಚನೆ:

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಪಕ್ಷದ ಸಂಘಟನೆಯನ್ನು ಕೆಳಹಂತದಿಂದಲೇ ಸದೃಢಗೊಳಿಸಬೇಕು ಎಂದು ಜಿಲ್ಲಾ ಘಟಕಗಳ ನೂತನ ಅಧ್ಯಕ್ಷರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದಾರೆ ಎಂದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುವ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಇದಕ್ಕಾಗಿ ಬೂತ್‌ ಮಟ್ಟದಿಂದಲೇ ಸಿದ್ಧತೆ ನಡೆಸಲು ಜಿಲ್ಲಾ ತಂಡಗಳ ಪಾತ್ರ ಯಾವ ರೀತಿ ಇರಬೇಕು ಎಂಬ ಕುರಿತು ಸಲಹೆ ನೀಡಲಾಯಿತು ಎಂದರು.

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎನ್‌ಡಿಎ ಮೈತ್ರಿ ಪಕ್ಷದ ಪ್ರಭಾವಿ ನಾಯಕ. ಜೆಡಿಎಸ್‌ ಎನ್‌ಡಿಎ ಕೂಟದ ಪ್ರಮುಖ ಅಂಗ ಪಕ್ಷ. ಮೈತ್ರಿ ಮತ್ತಿತರ ವಿಷಯಗಳ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ನಾವು ಇಲ್ಲಿ ರಾಜ್ಯ ಮಟ್ಟದಿಂದ ಬೂತ್‌ ಮಟ್ಟದವರೆಗೆ ಪಕ್ಷವನ್ನು ಬಲಗೊಳಿಸುವ ಕುರಿತು ಚರ್ಚೆ ಮಾಡಿದ್ದೇವೆ. ದೊಡ್ಡ ವಿಷಯಗಳ ಕುರಿತು ದೊಡ್ಡವರು ಮಾತನಾಡುತ್ತಾರೆ. ಬೆಂಗಳೂರಿನ ಬಿಜೆಪಿ ಅಥವಾ ಜೆಡಿಎಸ್‌ ಕಚೇರಿಯಲ್ಲಿ ಆಗುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ’

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ ಎಂದು ಪ್ರೀತಂಗೌಡ ಹೇಳಿದರು. ಇತ್ತೀಚೆಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಿನಿಂದಲೇ  ಕ್ಷೇತ್ರಗಳನ್ನು ಗಟ್ಟಿ ಮಾಡಿಕೊಳ್ಳಿ ಎಂದು ಜೆಡಿಎಸ್‌ ಕಾರ್ಯಕರ್ತರಿಗೆ ಸಲಹೆ ನೀಡಿದ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.