ಮಂಗಳೂರು: ‘ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಮತ್ತು ತನಿಖೆಯಲ್ಲಿ ಷಡ್ಯಂತ್ರದ ಸಂದೇಹ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಶನಿವಾರ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು, ‘ಬಾಡಿಗೆ ಹಂತಕರಿಂದ ಕೃತ್ಯ ನಡೆದಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಬಂಧಿತರಲ್ಲಿ ಇಬ್ಬರು ಹಿಂದೂಗಳ ಹೆಸರೂ ಇದೆ. ಇದು ತನಿಖೆಯ ಹಾದಿ ತಪ್ಪಿಸುವ ತಂತ್ರ ಎಂಬ ಬಲವಾದ ಶಂಕೆ ಇದೆ’ ಎಂದರು.
‘ಸುಹಾಸ್ ಕೊಲೆಯ ತನಿಖೆಯ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಗೃಹಸಚಿವರು ಅದಕ್ಕೂ ಮೊದಲು ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ್ದಾರೆ. ಆದರೆ ಜಿಲ್ಲೆಯ ಹಿಂದೂ ಮುಖಂಡರು, ಸಂಸದರು, ಶಾಸಕರನ್ನು ಮಾತನಾಡಿಸಲಿಲ್ಲ. ಫಾಝಿಲ್ ಕೊಲೆ ಆರೋಪಿಗಳನ್ನು ಬಂಧಿಸಿದ ನಂತರ ಮುಖ ಕಾಣಿಸುವ ಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಸುಹಾಸ್ ಕೊಲೆ ಆರೋಪಿಗಳಿಗೆ ಮುಸುಕು ಹಾಕಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಯಾರದಾದರೂ ಭಯ ಇದೆಯೇ’ ಎಂದು ಪ್ರಶ್ನಿಸಿದರು.
‘ಸುಹಾಸ್ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೂ ಕಾರಣ. ಸುಹಾಸ್ ಅವರನ್ನು ಮುಗಿಸುವುದಾಗಿ ತಿಂಗಳ ಹಿಂದೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಲಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗ ವಿಚಾರಣೆ ನಡೆಸಿದ್ದರೆ ಈ ಕೊಲೆಯನ್ನು ತಪ್ಪಿಸಬಹುದಾಗಿತ್ತು. ಆಗ ಪೊಲೀಸರು ಸುಹಾಸ್ ಅವರನ್ನೇ ಕರೆಸಿ ತೊಂದರೆ ಕೊಟ್ಟಿದ್ದಾರೆ. ಕೊಲೆ ಆದ ನಂತರವೂ ಸಂಭ್ರಮಿಸಿ ಸ್ಟೇಟಸ್ ಹಾಕಿದವರ ಮೇಲೆ ಕ್ರಮಕೈಗೊಳ್ಳಲಿಲ್ಲ. ಸುಹಾಸ್ ಕೊಲೆಗೆ ಬಜಪೆ ಠಾಣೆಯ ಕೆಲವರು ಸಹಾಯ ಮಾಡಿರುವ ಸಂದೇಹ ಇದೆ. ಇಲ್ಲವಾದರೆ ಜನನಿಬಿಡ ಪ್ರದೇಶದಲ್ಲಿ ರಾಜಾರೋಷವಾಗಿ ಕೊಚ್ಚಿ ಕೊಲ್ಲಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.
‘ಕೊಲೆ ನಡೆದಾಗ ಸ್ಥಳದಲ್ಲಿದ್ದ ಇಬ್ಬರು ಮಹಿಳೆಯರು ಯಾರು ಎಂಬುದಕ್ಕೆ ಇನ್ನೂ ಉತ್ತರ ಸಿಗಲಿಲ್ಲ. ಅವರನ್ನು ಬಂಧಿಸಲೂ ಇಲ್ಲ. ರಾಜ್ಯದ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಆಗುವ ಬಗ್ಗೆ ನಂಬಿಕೆ ಇಲ್ಲ. ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಕೊಲೆಗೆ ಬೆಂಬಲ ಕೊಟ್ಟವರ ವಿವರವನ್ನೂ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳ ಬಂಧನಕ್ಕೆ ಮೊದಲೇ, ‘ಮಹಮ್ಮದ್ ಫಾಝಿಲ್ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ ನೀಡಿದ್ದರು. ಈ ಮೂಲಕ ತಾವು ಧರ್ಮಾಂಧ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಜಿಹಾದ್ ಮನಸ್ಥಿತಿಯನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ’ ಎಂದು ಸತೀಶ್ ಕುಂಪಲ ದೂರಿದರು.
‘ಫಾಝಿಲ್ ಸೋದರ ಆದಿಲ್ ಮೆಹರೂಫನೇ ಸುಹಾಸ್ ಹತ್ಯೆ ಪ್ರಕರಣದ ಆರೋಪಿ ಎಂದು ಗೃಹಸಚಿವರು ಹಾಗೂ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಅದಕ್ಕೂ ಹಿಂದೆಯೇ ವಿಧಾನಸಭಾಧ್ಯಕ್ಷರೇ ಅರೋಪಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪೊಲೀಸರು ತನಿಖೆಯನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಲು ಹೇಗೆ ಸಾಧ್ಯ’ ಎಂದು ಕುಂಪಲ ಪ್ರಶ್ನಿಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯಕ್ ಉಳಿಪಾಡಿಗುತ್ತು, ಡಾ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಚೂರಿ ಇರಿತ, ಬಸ್‌ಗೆ ಕಲ್ಲು: 11 ಜನರ ಬಂಧನ
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ನಸುಕಿನಲ್ಲಿ ನಡೆದಿದ್ದ ಮೂರು ಚೂರಿ ಇರಿತ, ಹಲ್ಲೆ, ಬಸ್‌ಗಳಿಗೆ ಕಲ್ಲು ತೂರಿದ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಸುದ್ದಿ ಸ್ಥಳೀಯ ಯುಟ್ಯೂಬ್ ಚಾನಲ್‌ನಲ್ಲಿ ಲೈವ್ ಬರುತ್ತಿದ್ದಾಗ ಪ್ರಚೋದನಕಾರಿಯಾಗಿ ಕಮೆಂಟ್ ಮಾಡಿದ ಯುವಕನನ್ನು ಪತ್ತೆ ಹಚ್ಚಿದ್ದು, ಆತನಿಗೆ ನೋಟಿಸ್ ಜಾರಿಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ರಚಿಸುವುದಾಗಿ ಗೃಹಸಚಿವರು ತಿಳಿಸಿದ್ದಾರೆ. ಇದು ಹಿಂದೂಗಳ ನಿಗ್ರಹ ಪಡೆ ಆಗುವ ಸಾಧ್ಯತೆ ಹೆಚ್ಚು.ಸತೀಶ್ ಕುಂಪಲ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ
ಯು.ಟಿ.ಖಾದರ್ ಅವರು ತನಿಖೆಯ ದಿಕ್ಕು ತಪ್ಪಿಸುವ ಕುತಂತ್ರ ಮಾಡುತ್ತಿದ್ದಾರೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಲು ಅವರು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಡಾ.ವೈ.ಭರತ್ ಶೆಟ್ಟಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.