ADVERTISEMENT

ಹೊಸ ನಾಯಕತ್ವಕ್ಕೆ ಬಿಜೆಪಿ ಪ್ರಯೋಗ?

ಸದ್ಯದಲ್ಲೇ ಯುವ ಶಾಸಕರ ಪ್ರದೇಶವಾರು ತಂಡ ರಚನೆಗೆ ಸಿದ್ಧತೆ

ಎಸ್.ರವಿಪ್ರಕಾಶ್
Published 18 ಜೂನ್ 2020, 20:00 IST
Last Updated 18 ಜೂನ್ 2020, 20:00 IST
ರಾಜ್ಯ ಬಿಜೆಪಿ
ರಾಜ್ಯ ಬಿಜೆಪಿ   

ಬೆಂಗಳೂರು: ಪಕ್ಷದಲ್ಲಿ ಎರಡನೇ ಹಂತದ ನಾಯಕತ್ವವನ್ನು ಮುಂಚೂಣಿಗೆ ತರಲು ಮತ್ತು ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಲು ಯುವ ಶಾಸಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ಬಿಜೆಪಿ ವರಿಷ್ಠರು ಮತ್ತು ಸಂಘ ಪರಿವಾರದ ಪ್ರಮುಖರು ಚಿಂತನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿಕ ಪಕ್ಷದ ರಥವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಪಕ್ಷದಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ. ಪಕ್ಷದ ಸಂಘಟನೆ ಮತ್ತು ಎಲ್ಲ ವರ್ಗದ ಜನರನ್ನು ತಮ್ಮ ಕಡೆಗೆ ಸೆಳೆಯುವ ಯಡಿಯೂರಪ್ಪ ಅವರಿಗಿರುವ ಸಾಮರ್ಥ್ಯ ಇತರ ಮುಂಚೂಣಿ ನಾಯಕರಲ್ಲಿ ಕಂಡು ಬರದ ಕಾರಣ, ಹೊಸ ಪ್ರಯೋಗಕ್ಕೆ ವರಿಷ್ಠರು ಸಜ್ಜಾಗಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಉದ್ದೇಶದಿಂದಲೇ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಸಂಘಟನೆ ನಿರೀಕ್ಷಿಸಿದಂತೆ ಅವರಿಂದ ಬೆಳವಣಿಗೆ ಆಗಿಲ್ಲ ಮತ್ತು ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಬೆಳೆಯುವ ಕ್ಷಮತೆ ಕಂಡುಬಂದಿಲ್ಲ ಎಂಬುದು ವರಿಷ್ಠರು ಮತ್ತು ಸಂಘಪರಿವಾರವನ್ನು ಚಿಂತೆಗೆ ದೂಡಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹೊಸ ಪ್ರಯೋಗದ ಚಿಂತನೆ: ಪಕ್ಷ ಮತ್ತು ಪರಿವಾರ ಎರಡನ್ನೂ ಸರಿದೂಗಿಸಿಕೊಂಡು ಹೋಗುವವರಿಗೇ ಆದ್ಯತೆ. ಬೇರೆ ಪಕ್ಷಗಳಿಂದ ಬಂದವರಿಗೂ ಅವಕಾಶ ಇದೆ. ಈ ಪ್ರಯೋಗಕ್ಕೆ ಪ್ರಮುಖವಾಗಿ ಕೇಳಿ ಬಂದಿರುವ ಹೆಸರುಗಳೆಂದರೆ, ಕಂದಾಯ ಸಚಿವ ಆರ್‌.ಅಶೋಕ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕರಾದ ಅರವಿಂದ ಲಿಂಬಾವಳಿ, ಆರಗ ಜ್ಞಾನೇಂದ್ರ, ಬಸನಗೌಡಪಾಟೀಲ ಯತ್ನಾಳ, ವಿ. ಸುನಿಲ್‌ಕುಮಾರ್‌, ಅರವಿಂದ ಬೆಲ್ಲದ, ಶಿವಕುಮಾರ್‌ ಉದಾಸಿ,ದತ್ತಾತ್ರೇಯ ಪಾಟೀಲ ರೇವೂರ.

ಒಟ್ಟು ನಾಲ್ಕು ಅಥವಾ ಐದು ಜನರ ತಂಡಗಳನ್ನು ರಚಿಸಲಾಗುವುದು. ಇದರಲ್ಲಿ ಜಾತಿ ಪ್ರಾತಿನಿಧ್ಯವೂ ಇರುತ್ತದೆ. ಆಯಾಯ ವಿಭಾಗಗಳ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣೆಗೆ ಸನ್ನದ್ಧಗೊಳಿಸುವ ಕಾರ್ಯವನ್ನು ಈ ತಂಡಗಳು ಮಾಡಬೇಕು. ತಂಡದ ನಾಯಕತ್ವ ವಹಿಸಿಕೊಂಡವರು ತಮ್ಮ ವ್ಯಾಪ್ತಿ ಜಿಲ್ಲೆಗಳಲ್ಲಿ ನಿರಂತರ ಪ್ರವಾಸ ಮಾಡಿ, ವಿಧಾನಸಭೆ ಚುನಾವಣೆ ಮಾತ್ರವಲ್ಲ, ಅದಕ್ಕೆ ಮೊದಲು ಬರುವ ಸಣ್ಣ ಪುಟ್ಟ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಸವಾಲೂ ಇರುತ್ತದೆ ಎಂದು ಮೂಲಗಳು ಹೇಳಿವೆ.

ಉದಾಹರಣೆಗೆ ಹಳೇ ಮೈಸೂರು ಭಾಗದ ನಾಯಕತ್ವ ಆರ್‌.ಅಶೋಕ ಅವರಿಗೆ ನೀಡಿದರೆ, ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಬೇಕು. ಅದೇ ರೀತಿ ಬಿಲ್ಲವ ಸಮಾಜ ಹೆಚ್ಚಾಗಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುನಿಲ್‌ ಕುಮಾರ್ ಅವರಿಗೆ ತಂಡದ ನೇತೃತ್ವ ನೀಡಿದರೆ ಅತ್ಯಧಿಕ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

‘ನಳಿನ್‌ ಕುಮಾರ್ ಕಟೀಲ್‌ ಅಧ್ಯಕ್ಷರಾಗಿ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ. ಸಂಘಟನೆ ಮತ್ತು ರಾಜಕೀಯ ಮುನ್ನೋಟ ಇಲ್ಲದೇ ಇದ್ದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಆಗುತ್ತದೆ. ಪಕ್ಷದ ಅಧ್ಯಕ್ಷರಿಗೆ ಇರಬೇಕಾದ ಗಾಂಭೀರ್ಯ ರೂಢಿಸಿಕೊಳ್ಳುವಲ್ಲಿ ಅವರು ಸೋತಿ
ದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.