ADVERTISEMENT

ಬಿಜೆಪಿ ವರಿಷ್ಠರ ಖಡಕ್ ಸೂಚನೆ ಬಳಿಕ ರಮೇಶ ಜಾರಕಿಹೊಳಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 8:27 IST
Last Updated 3 ಮಾರ್ಚ್ 2021, 8:27 IST
ಸಚಿವ ರಮೇಶ ಜಾರಕಿಹೊಳಿ-ಸಂಗ್ರಹ ಚಿತ್ರ
ಸಚಿವ ರಮೇಶ ಜಾರಕಿಹೊಳಿ-ಸಂಗ್ರಹ ಚಿತ್ರ   

ಬೆಂಗಳೂರು: ಯುವತಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಜಲಸಂನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷಕ್ಕೆ ಮುಜುಗರ ಮಾಡಲು ಬಯಸುವುದಿಲ್ಲ. ತನಿಖೆ ಆದ ಬಳಿಕ ನಿರ್ದೋಷಿಯಾಗಿ ಹೊರ ಬರುತ್ತೇನೆ. ಆ ಬಳಿಕ ಮತ್ತೆ ಸಚಿವ ಸ್ಥಾನ ನೀಡಬೇಕು' ಎಂದು ರಮೇಶ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಮಂಗಳವಾರ ಸಂಜೆ ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸಂತ್ರಸ್ತ ಯುವತಿಯ ಪರವಾಗಿ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ದೂರು ಸಲ್ಲಿಸಿದ್ದರು.

ADVERTISEMENT

ರಮೇಶ ವಿರುದ್ಧ ದೂರು ದಾಖಲಾಗಿ, ಸಿ.ಡಿ ಬಿಡುಗಡೆಯಾದ ವಿಷಯವನ್ನು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ಗಂಭೀರವಾಗಿ ಪರಿಗಣಿಸಿ, ರಾಜೀನಾಮೆ ನೀಡುವಂತೆ ಖಡಕ್ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆ ಪತ್ರ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಬುಧವಾರ ಬೆಳಿಗ್ಗೆ ಈ ಸಂಬಂಧ ತುರ್ತು ಸಭೆ ನಡೆಸಿದರು. ಆ ಬಳಿಕ ರಾಜೀನಾಮೆ ನೀಡುವಂತೆ ಸಂದೇಶ ರವಾನೆ ಮಾಡಿದರು. ಈ ಸಂಬಂಧ ಯಡಿಯೂರಪ್ಪ ಅವರು ರಮೇಶ ಅವರ ಸಹೋದರ ಬಾಲಚಂದ್ರ ಅವರನ್ನು ಕರೆಸಿಕೊಂಡು ರಾಜೀನಾಮೆ ನೀಡುವಂತೆ ಸೂಚಿಸಿದರು. ಅದರ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ರಾಜೀನಾಮೆ ಪತ್ರವನ್ನು ಯಡಿಯೂರಪ್ಪ ಅವರಿಗೆ ಕಳಿಸಿದರು ಎಂದು ಮೂಲಗಳು ತಿಳಿಸಿವೆ.

ಸಚಿವ ರಾಜೀನಾಮೆ ನೀಡಿದ ಬೆನ್ನಲ್ಲೇ ದಿನೇಶ್‌ ಕಲ್ಲಹಳ್ಳಿ ಪ್ರತಿಕ್ರಿಯೆ ನೀಡಿ, ರಾಜೀನಾಮೆ ಪಡೆದು ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಹೇಳಿದರು.

ಮಂಗಳವಾರ ಸಂಜೆ ದೂರು ನೀಡಿದ ಬಳಿಕ, ಸಿ.ಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು. ಇದರ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತಿಭಟನೆ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ರಮೇಶ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.