ADVERTISEMENT

ಪಟ್ಟಿ ಹೊರಗಿಟ್ಟು ಮಕ್ಕಳ ಆಯೋಗಕ್ಕೆ ನೇಮಕ; ಬಿಜೆಪಿ ಮುಖಂಡನ ನೇಮಕಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:15 IST
Last Updated 27 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಂಡ್ಯದ ಬಿಜೆಪಿ ಮುಖಂಡ ಕೆ. ನಾಗಣ್ಣಗೌಡ ಅವರನ್ನು ಸರ್ಕಾರ ನೇಮಿಸಿದ ಬೆನ್ನಲ್ಲೆ, ಅವರ ಆಯ್ಕೆಗೆ ಅಪಸ್ವರ ಎದ್ದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ನಾಗಣ್ಣಗೌಡ ಹೆಸರೇ ಇಲ್ಲ!

ಆಯೋಗದ ಅಧ್ಯಕ್ಷರಾಗಿದ್ದ ಡಾ. ಅಂತೋಣಿ ಸೆಬಾಸ್ಟಿಯನ್ ಅವಧಿ 2021ರ ಡಿ. 4ಕ್ಕೆ ಕೊನೆಯಾಗಿತ್ತು. ಆ ಬಳಿಕ, ಆಯೋಗದ 6 ಸದಸ್ಯರ ಪೈಕಿ ಒಬ್ಬರಾಗಿದ್ದ ಜಯಶ್ರೀ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸ ಲಾಗಿತ್ತು. ಅಧ್ಯಕ್ಷರ ನೇಮಕಾತಿಗೆ ಇಲಾಖೆ ಫೆ. 1ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಲು ಮಾರ್ಚ್‌ 3 ಕೊನೆಯ ದಿನವಾಗಿತ್ತು.

ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುವ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಿದವರ ಪೈಕಿ, ರಾಯಚೂರಿ ನವರಾದ ವೀಣಾ ಪಲ್ಲಕ್ಕಿ, ಜಯಶ್ರೀ, ಶಿವಮೊಗ್ಗದ ಡಿ. ಶಂಕರಪ್ಪ, ಬೆಂಗಳೂರಿನವರಾದ ಮರಿಸ್ವಾಮಿ, ಬಿಜು ಪಿ. ಥಾಮಸ್‌, ಮಧು, ವಾಸುದೇವ ಶರ್ಮಾ, ವಿ.ಪಿ. ನಿರಂಜನಾರಾಧ್ಯ, ಧಾರವಾಡದ ಅಶೋಕ ಜಿ. ಯರಗಟ್ಟಿ, ಬೆಳಗಾವಿಯ ಭಾರತಿ ಎಂಬ 10 ಜನರ ಹೆಸರನ್ನು ಇಲಾಖೆ ಶಿಫಾರಸು ಮಾಡಿತ್ತು. ಆದರೆ, ಈ ಪಟ್ಟಿಯಲ್ಲಿ ನಾಗಣ್ಣಗೌಡ ಅವರ ಹೆಸರು ಇಲ್ಲ.

ADVERTISEMENT

‘ಮಕ್ಕಳ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದವರು ಮಾತ್ರ ಆಯ್ಕೆಯಾಗಲು ಅರ್ಹರು ಎಂದು ಮಕ್ಕಳ ಹಕ್ಕುಗಳ ಕಾಯ್ದೆ ಹೇಳುತ್ತದೆ. ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧ ಇರಬಾರದು ಎಂಬುದೂ ನಿಯಮದಲ್ಲಿದೆ. ಇಲಾಖೆಯ ಸಚಿವರ ನೇತೃತ್ವದ ಆಯ್ಕೆ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡುತ್ತದೆ. ಅರ್ಜಿ ಸಲ್ಲಿಸಿದವರ ಅರ್ಹತೆ ಪರಿಶೀಲಿಸಿ ಇಲಾಖೆಯು ಶಿಫಾರಸು ಮಾಡಿರುತ್ತದೆ. ಹಾಗಿದ್ದರೂ, ಪಟ್ಟಿಯಲ್ಲಿ ಇಲ್ಲದ ವ್ಯಕ್ತಿಯೊಬ್ಬರನ್ನು ಸರ್ಕಾರ ಆಯ್ಕೆ ಮಾಡಿ ರುವುದು ನಿಯಮಬಾಹಿರ’ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ ಆಗಿರುವು ದರಿಂದ ಈ ಹುದ್ದೆಗೆ ನಾಮನಿರ್ದೇಶನ ಅಥವಾ ನೇರ ನೇಮಕಾತಿಗೆ ಅವಕಾಶವಿಲ್ಲ. ಅರ್ಜಿ ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆ ನಡೆಸಬೇಕು. ಈ ಹುದ್ದೆಗೆ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದವು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.