ADVERTISEMENT

ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾಯಿಸುವ ಯತ್ನ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 30 ಮೇ 2020, 16:19 IST
Last Updated 30 ಮೇ 2020, 16:19 IST
ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ
ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಅವರನ್ನು ಬದಲಾಯಿಸುವ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಜಗದೀಶ್‌ ಶೆಟ್ಟರ್‌ ಪರವಾಗಿದ್ದರೆ, ಮೂಲ ಬಿಜೆಪಿಯವರು ಪ್ರಲ್ಹಾದ ಜೋಶಿ ಪರವಾಗಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಬಾಂಬ್‌ ಸಿಡಿಸಿದ್ದಾರೆ.

ಇಲ್ಲಿನ ತಮ್ಮ ಮನೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯ ಭಿನ್ನಮತೀಯರ ನಿರ್ಧಾರದ ಮೇಲೆ ಮಧ್ಯಂತರ ಚುನಾವಣೆ ಭವಿಷ್ಯ ನಿಂತಿದ್ದು, ಮುಂದೆ ಏನಾಗುತ್ತೆ ಎನ್ನುವುದನ್ನು ಕಾದು ನೋಡುತ್ತಿದ್ದೇವೆ’ ಎಂದರು.

‘ಬಿಜೆಪಿ ಶಾಸಕ ಉಮೇಶ ಕತ್ತಿ ಹಾಗೂ ಅವರ ಟೀಂ ಹೇಗೆ ಕುಸ್ತಿ ಹಿಡಿತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಸಣ್ಣ ಕುಸ್ತಿ ಹಿಡಿತಾರೊ, ದೊಡ್ಡ ಕುಸ್ತಿ ಹಿಡಿತಾರೊ ಎನ್ನುವುದರ ಮೇಲೆ ನಿಂತಿದೆ. ಬರೀ ಸೆಡ್ಡು ಹೊಡೆದು ಬಾಳೆಹಣ್ಣು ತಗೊಂಡು ಬಂದ್ರೆ ಬಾಳೆಹಣ್ಣಿನ ಕುಸ್ತಿಯಾಗುತ್ತದೆ. ನಿಕಾಲಿ ಕುಸ್ತಿ ಹಿಡಿದು ಝೇಂಡಾ ಹಿಡಿದುಕೊಂಡು ಬರಬೇಕು’ ಎಂದು ಸವಾಲು ಹಾಕಿದರು.

ADVERTISEMENT

‘ಅವರು ಎಷ್ಟು ಧೈರ್ಯ ಮಾಡ್ತಾರೆ ಅದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಚುನಾವಣೆ ಬಂದ ಬಳಿಕ ಆ ಕಡೆ, ಈ ಕಡೆ ಶಾಸಕರು ಬರುವುದು ಹೋಗುವುದು ಇದ್ದೇ ಇರುತ್ತದೆ. ಇನ್ನು ಕುಸ್ತಿ ಹಿಡಿಯುವವರು ಕುಸ್ತಿಯಲ್ಲಿ ಬರೀ ಅಂಗಿ ಹರಿದುಕೊಂಡು ಬಂದ್ರೆ ಏನೂ ಪ್ರಯೋಜನವಿಲ್ಲ. ಬಿಜೆಪಿ ಬಂಡಾಯ ಶಾಸಕರ ನಿರ್ಧಾರವನ್ನು ನಾವು ಕಾಯ್ದು ನೋಡುತ್ತೇವೆ’ ಎಂದು ನುಡಿದರು.

ಕಾಂಗ್ರೆಸ್‌ನಿಂದ 5 ಜನ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧವೆಂದು ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೊಸದಾಗಿ ರಾಜೀನಾಮೆ ಕೊಡಿಸಿದರೆ ಅವರಿಗೆ ಎಲ್ಲಿಂದ ಮಂತ್ರಿ ಮಾಡುತ್ತಾರೆ. ಮಂತ್ರಿ ಆಗುವುದಾದರೆ ರಾಜೀನಾಮೆ ನೀಡಬಹುದು. ಶಾಸಕರಾಗಿಯೇ ಇರಬೇಕಾದರೆ ಅಲ್ಲಿಗೆ ಹೋಗುವುದಕ್ಕಿಂತ ಇಲ್ಲಿರುವುದೇ ವಾಸಿ. ಕಾಂಗ್ರೆಸ್‌ನಿಂದ ಯಾರೂ ಬಿಟ್ಟು ಹೋಗಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.