ADVERTISEMENT

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಾಳೆ: ಚುನಾವಣಾ ಸಿದ್ಧತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 18:30 IST
Last Updated 18 ಡಿಸೆಂಬರ್ 2018, 18:30 IST

ಬೆಳಗಾವಿ: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೇ 20ರಂದು ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯಲಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 24 ಸ್ಥಾನಗಳನ್ನು ಗೆಲ್ಲಬೇಕು ಎಂದು ಪಕ್ಷದ ಹೈಕಮಾಂಡ್‌ ‘ಮಿಷನ್‌ 24’ ಗುರಿ ನೀಡಿದೆ. ಪಕ್ಷವು 18 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಜತೆಗೆ, ಎಲ್ಲ ಕ್ಷೇತ್ರಗಳಿಗೂ ಪ್ರಭಾರಿ ಹಾಗೂ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಈ ಸಭೆಯಲ್ಲಿ ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡ ಬೆನ್ನಲ್ಲೇ, ರಾಜ್ಯದ ಮುಖಂಡರನ್ನು ಸಹ ದೆಹಲಿಗೆ ವರಿಷ್ಠರು ಕರೆಸಿಕೊಂಡಿದ್ದರು. ಚುನಾವಣಾ ವಿಷಯದಲ್ಲಿ ಉದಾಸೀನ ತೋರದಂತೆ ತಾಕೀತು ಮಾಡಿದ್ದರು. 79 ಅಂಶಗಳನ್ನು ಒಳಗೊಂಡ ಗುರಿಯನ್ನು ನೀಡಿದ್ದರು. ಈ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಶಾಸಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ.‌

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು 43 ಕೋಟಿ ಫಲಾನುಭವಿಗಳಿಗೆ ತಲುಪಿದೆ. ಇವುಗಳ ಬಗ್ಗೆ ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ಬಂದಿದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.