ADVERTISEMENT

ಸಿಎಂಗೆ ಅನಿವಾರ್ಯ ಬಂದಾಗ ಒಬಿಸಿ ಹೆಲ್ಮೆಟ್‌: ವಿ. ಸುನಿಲ್ ಕುಮಾರ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:50 IST
Last Updated 5 ಮಾರ್ಚ್ 2025, 15:50 IST
<div class="paragraphs"><p>ವಿ. ಸುನಿಲ್ ಕುಮಾರ್‌</p></div>

ವಿ. ಸುನಿಲ್ ಕುಮಾರ್‌

   

(ಸಂಗ್ರಹ ಚಿತ್ರ)

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಅನಿವಾರ್ಯ ಎದುರಾದಾಗಲೆಲ್ಲ ಹಿಂದುಳಿದ ವರ್ಗಗಳ (ಒಬಿಸಿ) ಹೆಲ್ಮೆಟ್‌ ಧರಿಸುತ್ತಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿವಾರು ಜನಗಣತಿ) ವರದಿಯನ್ನೂ ಸ್ವಯಂ ರಕ್ಷಣೆಗೆ ಬಳಸಿಕೊಳ್ಳುತ್ತಾರೆ’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್‌ ವಿಧಾನಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದರು.

ADVERTISEMENT

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘2015ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಯೋಗವು ಜಾತಿವಾರು ಜನಗಣತಿ ವರದಿ ಸಲ್ಲಿಸಲು ಮುಂದಾಗಿತ್ತು. ಆದರೆ, ಆಯೋಗದಿಂದ ಆಗ ವರದಿ ಪಡೆದಿರಲಿಲ್ಲ. ಈಗಲೂ ವರದಿಯ ಸ್ಥಿತಿ ಏನಾಗಿದೆ ಎಂಬುದನ್ನು ಬಹಿರಂಗಪಡಿಸುತ್ತಿಲ್ಲ’ ಎಂದರು.

‘ಜಾತಿವಾರು ಜನಗಣತಿ ವರದಿ ಕುರಿತು ಚರ್ಚೆ ನಡೆಯುತ್ತಲೇ ಇದೆ. ₹ 165 ಕೋಟಿ ವೆಚ್ಚ ಮಾಡಿ ನಡೆಸಿದ ಗಣತಿಯ ವರದಿ ಬಹಿರಂಗಪಡಿಸದಂತೆ ಯಾವ ಶಕ್ತಿ ತಡೆಯುತ್ತಿದೆ? ವಿಧಾನಮಂಡಲದ ಈ ಅಧಿವೇಶನ ಮುಗಿಯುವುದರೊಳಗೆ ವರದಿಯನ್ನು ಸದನದಲ್ಲಿ ಮಂಡಿಸಬೇಕು’ ಎಂದು ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್‌ನಂಥ ಸರ್ಕಾರ: ‘ರಾಜ್ಯ ಸರ್ಕಾರದ ಸ್ಥಿತಿಗೂ ಇಂದಿರಾ ಕ್ಯಾಂಟೀನ್‌ಗೂ ಹೋಲಿಕೆ ಇದೆ. ಸರ್ಕಾರದ ಲೆಕ್ಕದಲ್ಲಿ 600 ಇಂದಿರಾ ಕ್ಯಾಂಟೀನ್‌ ಇವೆ. ಆದರೆ, ಅಲ್ಲಿ ಇಡ್ಲಿ ಸಿಕ್ಕರೆ ಸಾಂಬಾರು ಇರುವುದಿಲ್ಲ. ಈ ಸರ್ಕಾರದಲ್ಲೂ ಹಾಗೆಯೇ ಆಗಿದೆ. ಸರ್ಕಾರ ಇದೆ. ಆದರೆ, ಯೋಜನೆ ಮತ್ತು ಅನುದಾನವೇ ಇಲ್ಲ’ ಎಂದು ಟೀಕಿಸಿದರು.

ಕಾನೂನು ಸುವ್ಯವಸ್ಥೆ ಕುರಿತು ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ. ಗಂಭೀರ ಸ್ವರೂಪದ ಪ್ರಕರಣಗಳೇ ನಡೆದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಮಂಡ್ಯ ಮತ್ತು ಶಿವಮೊಗ್ಗದಲ್ಲಿ ನಡೆದ ಗಲಭೆಗಳು, ಮೈಸೂರಿನ ಉದಯಗಿರಿ ಪ್ರಕರಣ, ಬೀದರ್‌ನಲ್ಲಿ ನಡೆದ ದರೋಡೆ ಮತ್ತು ಕೊಲೆ ಎಲ್ಲವೂ ಯಾವರ ರೀತಿಯ ಪ್ರಕರಣಗಳು ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.