ADVERTISEMENT

ಬಿಜೆಪಿ ನಾಯಕರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 2:15 IST
Last Updated 9 ಮಾರ್ಚ್ 2020, 2:15 IST
   

ಕೆಜಿಎಫ್‌: ಬಿಜೆಪಿ ಪಕ್ಷದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮತ್ತು ಮಾಜಿ ಶಾಸಕ ವೈ.ಸಂಪಂಗಿ ನಡುವೆ ನಡೆಯುತ್ತಿದ್ದ ಶೀಥಲ ಸಮರ ಬಹಿರಂಗವಾಗಿದ್ದು, ಸಂಸದರ ಮೇಲೆ ಮಾಜಿ ಶಾಸಕರು ಬಹಿರಂಗವಾಗಿ ಅಸಹನೆ ಹೊರಹಾಕಿದ್ದಾರೆ.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಜನೌಷಧಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅವರು, ಸಂಸದರು ಸ್ಥಳದಿಂದ ನಿರ್ಗಮಿಸಿದ ನಂತರ ತಮ್ಮ ಪುತ್ರಿ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಅಶ್ವಿನಿ ಮತ್ತು ಬೆಂಬಲಿಗರೊಡನೆ ಜನೌಷಧಿ ಮಳಿಗೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜನೌಷಧ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬರುವಂತೆ ಸಂಸದರು ನನ್ನನ್ನು ಆಹ್ವಾನಿಸಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯ ಕಾರ್ಯಕ್ರಮವಾಗಿದ್ದರಿಂದ ಅಭಿಮಾನದಿಂದ ಬಂದಿದ್ದೇನೆ’ ಎಂದರು.

ADVERTISEMENT

ಬಿಜೆಪಿ ರಾಷ್ಷ್ರೀಯ ಪಕ್ಷ. ಹಾಗಾಗಿ ಎಂಎಲ್‌ಎ ಟಿಕೆಟ್‌ ಎಂಪಿ ಜೇಬಿನಲ್ಲಿದೆ ಎಂದು ಯಾರೂ ಅಂದುಕೊಳ್ಳಬಾರದು. ತೀರ್ಮಾನ ಮಾಡುವ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದರು.

ನಾನು ದಲಿತ ಸಂಘಟನೆಯಿಂದ ಬಂದವನು. ಇದನ್ನು ಗುರುತಿಸಿ ಯಡಿಯೂರಪ್ಪ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟರು. ಮೂರನೇ ವ್ಯಕ್ತಿ ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಾನು ಅಂದುಕೊಳ್ಳುವುದಿಲ್ಲ. ಸಂಘಟನೆ ಮಾಡುವ ಶಕ್ತಿ ನನ್ನಲ್ಲಿದೆ. ಜನ ನೂರು ಮಾತನಾಡಿದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.