ADVERTISEMENT

2023ರ ವಿಧಾನಸಭಾ ಚುನಾವಣೆ | ಹಿಂದುತ್ವ–ಪ್ರಗತಿ ಮಂತ್ರ

ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಲು ಅಮಿತ್‌ ಶಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 2:55 IST
Last Updated 29 ಡಿಸೆಂಬರ್ 2022, 2:55 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ    

ಬೆಳಗಾವಿ: ಹಿಂದುತ್ವ ಹಾಗೂ ಅಭಿವೃದ್ಧಿಯ ತನ್ನ ಮಂತ್ರಕ್ಕೆ ಸಾಣೆ ಹಿಡಿಯುತ್ತಾ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಳೆ ಮೈಸೂರು ಭಾಗಕ್ಕೆ ಕಾಲಿಡುತ್ತಿದ್ದಾರೆ. ಬಿಜೆಪಿ ಪಾಲಿಗೆ ಲಾಗಾಯ್ತಿನಿಂದ ದುರ್ಬಲ ಕ್ಷೇತ್ರ ಎನಿಸಿರುವ ಈ ಭಾಗದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಉಮೇದು ಅವರ ಭೇಟಿಯ ಹಿಂದೆಯಿದೆ.

ಅಮಿತ್ ಶಾ ಗುರುವಾರ ರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಅದರ ಮರುದಿನವೇ ವಿಜಯಪುರದಲ್ಲಿ ಕಾಂಗ್ರೆಸ್‌ ಬೃಹತ್ ಸಮಾವೇಶ ಆಯೋಜಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಜಾರಿಯಲ್ಲಿನ ಸರ್ಕಾರದ ವಿಳಂಬವನ್ನೇ ಮುಂದುಮಾಡಿ, ಕಾಂಗ್ರೆಸ್‌ ಟೀಕಾಪ್ರಹಾರ ಮಾಡಲು ಸಿದ್ಧತೆ ನಡೆಸಿದೆ. ಅದೇ ದಿನ ಮಂಡ್ಯದಲ್ಲಿ ಬೃಹತ್ ಸಮಾವೇಶದಲ್ಲಿ ಅಮಿತ್‌ ಶಾ ಮಾತನಾಡಿ, ಮತಬುಟ್ಟಿಗೆ ಕೈಹಾಕುವ ತಮ್ಮ ಮೊದಲ ತಂತ್ರವನ್ನು ಪ್ರದರ್ಶಿಸಲಿದ್ದಾರೆ.

ಒಕ್ಕಲಿಗರ ಮತಗಳೇ ಹೆಚ್ಚಾಗಿರುವ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಶಕ್ತಿಕೇಂದ್ರ ಎನಿಸಿಕೊಂಡಿರುವ ಹಳೆ ಮೈಸೂರು ಭಾಗಕ್ಕೆ ಅಮಿತ್ ಶಾ ನೀಡುತ್ತಿರುವ ಭೇಟಿ, ಎದುರಾಳಿ ಪಕ್ಷಗಳನ್ನು ಎದುರಿಸುವ ತಂತ್ರಕ್ಕೆ ಮುನ್ನುಡಿ ಎಂದೇ ಪಕ್ಷದವರು ಬಿಂಬಿಸಿದ್ದಾರೆ.

ADVERTISEMENT

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲು ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಆದ್ದರಿಂದ ಈ ಜಿಲ್ಲೆಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ತಿಳಿಸಿದ್ದು ಇದನ್ನೇ ಪುಷ್ಟೀಕರಿಸುತ್ತದೆ.

‘ಹಿಂದುತ್ವ ಮತ್ತು ಅಭಿವೃದ್ಧಿ ವಿಷಯಗಳ ಆಧಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಮಿತ್‌ ಶಾ ಅವರು ಯಾವ ಪಿಚ್‌ನಲ್ಲಾದರೂ ಸರಿ ಆಡಬಲ್ಲ ಒಳ್ಳೆಯ ಆಟಗಾರ. ಒಂದೇ ಪಿಚ್‌ ಆದರೂ ಸರಿ, ಬೇರೆ ಬೇರೆ ಪಿಚ್‌ ಆದರೂ ಸರಿ ಉತ್ತಮವಾಗಿಯೇ ಆಡುತ್ತಾರೆ. ಹಳೆ ಮೈಸೂರು ಮಾತ್ರವಲ್ಲ, ಇಡೀ ರಾಜ್ಯವನ್ನು ಫೋಕಸ್‌ ಮಾಡಿಕೊಂಡು ನಮ್ಮ ಗುರಿ ತಲುಪುತ್ತೇವೆ’ ಎಂದರು.

‘ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಅಧಿಕಾರಕ್ಕೆ ಬರುವುದು ಸುಲಭ. ಈ ಹಿಂದಿನ ಚುನಾವಣೆಯಲ್ಲಿ ನಾವು ಈ ಅಂಶವನ್ನು ಗುರುತಿಸಿದ್ದೇವೆ. ಈ ಭಾಗದಲ್ಲಿ ನಾವು ಜಾತಿ ಹೆಸರಿನಲ್ಲಿ ಚುನಾವಣೆ ಎದುರಿಸುವುದಿಲ್ಲ. ನಮ್ಮ ಸಿದ್ಧಾಂತ ಮತ್ತು ಅಭಿವೃದ್ಧಿಯನ್ನು ಮುಂದಿಟ್ಟು ಜನರ ಬಳಿ ಹೋಗುತ್ತೇವೆ. ಒಂದು ಕಾಲದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್‌ನ ಭಧ್ರಕೋಟೆ ಆಗಿತ್ತು. ಈಗ ಜಿಲ್ಲಾ ಪಂಚಾಯಿತಿಯಿಂದ ಹಿಡಿದು, ಸಂಸತ್ತಿನವರೆಗೆ ಬಿಜೆಪಿಯ ಜನಪ್ರತಿನಿಧಿಗಳಿದ್ದಾರೆ’ ಎಂದು ರವಿ ಹೇಳಿದರು.

‘ಜನರಿಗೆ ತೋರಿಸಲು ನಮ್ಮ ಬಳಿ ರಿಪೋರ್ಟ್ ಕಾರ್ಡ್‌ ಇದೆ. ಹಳೆ ಮೈಸೂರಿನ ಭಾಗದವರಿಗೆ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ತಲುಪಿಲ್ಲವೇ? ಬೆಂಗಳೂರು–ಮೈಸೂರು ಕಾರಿಡಾರ್‌ನಿಂದ ಜನರಿಗೆ ಅನುಕೂಲವಾಗಿಲ್ಲವೇ? ಹಾಲು ಉತ್ಪಾದಕರಿಗೆ ಸಹಾಯಧನ ಪ್ರಾರಂಭಿಸಿದ್ದೇ ಬಿಜೆಪಿ. ಹಾಸನ ವಿಮಾನ ನಿಲ್ದಾಣ ನಿರ್ಮಾಣ ದೇವೇಗೌಡರ ಕನಸಾಗಿದ್ದರೂ ಅದನ್ನು ಸಾಕಾರಗೊಳಿಸಿದ್ದು ನಮ್ಮ ಪಕ್ಷ. ಜನರಿಗೆ ಹೇಳಲು ಇಂತಹ ಹಲವಾರು ವಿಷಯಗಳಿವೆ’ ಎಂದರು.

ಮಂಡ್ಯದಲ್ಲಿ ಶುಕ್ರವಾರ ನಡೆಯಲಿರುವ ಜನಸಂಕಲ್ಪ ಸಮಾವೇಶದಲ್ಲಿ ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ ಭಾಗದಿಂದ ಜನರು ಬಂದು ಸೇರಲಿದ್ದಾರೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.