ADVERTISEMENT

ಸರ್ಕಾರದ ವಿರುದ್ಧ ಬೀದಿಗಿಳಿದು ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
ಬೆಂಗಳೂರಿನಲ್ಲಿ ನಡೆದ ‍ಪ್ರತಿಭಟನೆಯಲ್ಲಿ ಶಾಸಕ ಆರ್‌.ಅಶೋಕ ಮಾತನಾಡಿದರು. ಸಂಸದ ಪಿ.ಸಿ.ಮೋಹನ್‌, ಶಾಸಕ ಉದಯ ಗರುಡಾಚಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ–ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆದ ‍ಪ್ರತಿಭಟನೆಯಲ್ಲಿ ಶಾಸಕ ಆರ್‌.ಅಶೋಕ ಮಾತನಾಡಿದರು. ಸಂಸದ ಪಿ.ಸಿ.ಮೋಹನ್‌, ಶಾಸಕ ಉದಯ ಗರುಡಾಚಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಿರಂತರ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಮೈತ್ರಿ ಸರ್ಕಾರದ ವೈಫಲ್ಯ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಆಪಾದಿಸಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಂಪನ್ಮೂಲ ಕ್ರೋಡೀಕರಣವೇ ಆಗುತ್ತಿಲ್ಲ. ಬರಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿಯೇ ನೀಡಿಲ್ಲ ಎಂದು ದೂರಿದರು.

ADVERTISEMENT

‘ಸರ್ಕಾರ ದಿವಾಳಿಯಾಗಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಶಾಸಕರ ನಿಧಿಗೆ ನಯಾಪೈಸೆ ನೀಡಿಲ್ಲ. ಹೊಸ ಮುಖ್ಯಮಂತ್ರಿಗೆ ಅವಕಾಶ ನೀಡೋಣ ಎಂದು ಐದು ತಿಂಗಳು ಕೈಕಟ್ಟಿ ಕುಳಿತಿದ್ದೆವು. ಇನ್ನು ಅವಕಾಶ ಕೊಡುವುದಿಲ್ಲ’ ಎಂದರು.

‘ಬೆಳಗಾವಿಯ ರೈತ ಮಹಿಳೆಗೆ ಮುಖ್ಯಮಂತ್ರಿ ಅವಮಾನ ಮಾಡಿದ್ದಾರೆ. ಇದು ನಾಡಿನ ಎಲ್ಲ ಮಹಿಳೆಯರಿಗೆ ಮಾಡಿರುವ ಅವಮಾನ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಹೋಗುವವರೆಗೂ ಮಹಿಳೆಯರು ಪ್ರತಿಭಟನೆ ನಡೆಸಬೇಕು. ಪಕ್ಷದ ಮಹಿಳಾ ಕಾರ್ಯಕರ್ತರು ಮುಂಚೂಣಿಯಲ್ಲಿರಬೇಕು’ ಎಂದು ಅವರು ಕರೆ ನೀಡಿದರು.

‘ಉತ್ತರ ಕರ್ನಾಟಕದ ಜನರ ನೋವಿಗೆ ಕಿವಿಯಾಗುತ್ತೇನೆ ಎಂಬ ಕಾರಣ ನೀಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದರು. ಆ ಮನೆಯಲ್ಲಿ ಒಂದು ದಿನವೂ ವಾಸ ಮಾಡಲಿಲ್ಲ. ಓಡಿಬಂದರು. ಜೆಡಿಎಸ್‌ ಗೆದ್ದಿರುವುದು 37 ಸ್ಥಾನಗಳನ್ನಷ್ಟೇ. 104 ಸ್ಥಾನಗಳನ್ನು ಗೆದ್ದಿರುವ ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಅವರ ಧಿಮಾಕಿಗೆ ಪಾಠ ಕಲಿಸಬೇಕಿದೆ’ ಎಂದರು.

ಶಾಸಕ ಆರ್‌.ಅಶೋಕ ಮತ್ತಿತರರು ಸರ್ಕಾರದ ವಿರುದ್ಧ ಹರಿಹಾಯ್ದರು.

‘ಇದೂ ಮೀ–ಟೂ ವ್ಯಾಪ್ತಿಗೆ ಬರುವುದಿಲ್ಲವೇ?’

ರೈತ ಮಹಿಳೆ ಜಯಶ್ರೀ ಅವರಿಗೆ ಎಲ್ಲಿ ಮಲಗಿದ್ದೆ ಎಂದು ಕೇಳುವ ಕುಮಾರಸ್ವಾಮಿ ಅವರಿಗೆ ನೈತಿಕತೆ ಇಲ್ಲವೇ? ಇದು ಕೂಡಾ ಪರೋಕ್ಷವಾಗಿ ಮೀ–ಟೂ ಆಂದೋಲನದ ವ್ಯಾಪ್ತಿಗೆ ಬರುವುದಿಲ್ಲವೇ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದರು.

‘ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಇದುವರೆಗೂ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಆಗಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಸುಳಿಯದ ಶಾಸಕರು, ಪಾಲಿಕೆ ಸದಸ್ಯರು!

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದ 11 ಶಾಸಕರ ಪೈಕಿ ಇಬ್ಬರಷ್ಟೇ ಪಾಲ್ಗೊಂಡಿದ್ದರು. ಬಿಬಿಎಂಪಿಯ 101 ಸದಸ್ಯರ ಪೈಕಿ ಎಂಟು ಮಂದಿಯಷ್ಟೇ ಭಾಗವಹಿಸಿದ್ದರು. ಪಾಲ್ಗೊಂಡ ಕಾರ್ಯಕರ್ತರ ಸಂಖ್ಯೆ ನೂರರ ಆಸುಪಾಸಿನಲ್ಲಿತ್ತು.

* ತಾಜ್ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕಡತಗಳನ್ನು ಪರಿಶೀಲಿಸುವ ಮೂಲಕ ಕುಮಾರಸ್ವಾಮಿ ಅವರು ಕೆಂಗಲ್‌ ಹನುಮಂತಯ್ಯ ಅವರಿಗೆ ಅವಮಾನಿಸಿದ್ದಾರೆ. ವಿಧಾನಸೌಧಕ್ಕೆ ಬೀಗ ಹಾಕುವ ದಿನ ಬರಬಹುದು.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.