ADVERTISEMENT

ನಾಳೆ ಬಿಜೆಪಿ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 22:35 IST
Last Updated 31 ಮಾರ್ಚ್ 2025, 22:35 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ರಾಜ್ಯ ಸರ್ಕಾರ ಬಡ, ಮಧ್ಯಮ ವರ್ಗದವರ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕಿದ್ದು, ಅದನ್ನು ವಿರೋಧಿಸಿ ಸರ್ಕಾರದ ವಿರುದ್ಧ ರಾಜ್ಯ ವ್ಯಾಪಿ ಸರಣಿ ಪ್ರತಿಭಟನೆ ಮತ್ತು ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಏ.2 ರ ಬೆಳಿಗ್ಗೆ 11 ರಿಂದ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ. ಈ ಧರಣಿಯಲ್ಲಿ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು, ಪದಾಧಿಕಾರಿಗಳು ಭಾಗವಹಿಸುತ್ತಾರೆ’ ಎಂದು ಹೇಳಿದರು.

ಬಿಜೆಪಿಯ ಶಾಸಕರ ಅಮಾನತು ಕ್ರಮ ಖಂಡಿಸಿ ಅದೇ ದಿನ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಪ್ರತಿಭಟಿಸುತ್ತೇವೆ. ಅಲ್ಲದೇ, ಏ. 5 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಮಂಡಲ ಮಟ್ಟದಲ್ಲಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

7 ರಿಂದ ಜನಜಾಗೃತಿ ಹೋರಾಟ: ಏ.7 ರಂದು ಮೈಸೂರಿನಿಂದ ಜನಜಾಗೃತಿಗಾಗಿ ‘ಜನಾಕ್ರೋಶ’ ಹೋರಾಟ ಆರಂಭವಾಗಲಿದೆ. ಅಂದು ಮಧ್ಯಾಹ್ನ 3ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. 7ರಂದು ಮೈಸೂರು, ಚಾಮರಾಜನಗರ ಜಿಲ್ಲೆ, 8 ರಂದು ಬೆಳಿಗ್ಗೆ ಮಂಡ್ಯ, ಮಧ್ಯಾಹ್ನ ಹಾಸನ, 9 ರಂದು ಕೊಡಗು ಮತ್ತು ಮಂಗಳೂರು, 10 ರಂದು ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಹೋರಾಟ ನಡೆಯಲಿದೆ ಎಂದು ವಿಜಯೇಂದ್ರ ವಿವರಿಸಿದರು.

‘ಇದು ಮೊದಲ ಹಂತದ ಹೋರಾಟ. ಈ ಕುರಿತು ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಜತೆ ಚರ್ಚಿಸಿದ್ದೇನೆ. 2ನೇ ಹಂತದ ಹೋರಾಟ ಏ.13ರಿಂದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ. ಪ್ರತಿ ಜಿಲ್ಲಾಕೇಂದ್ರದಲ್ಲಿ 2 ರಿಂದ 3 ಕಿ.ಮೀ ಪಾದಯಾತ್ರೆ ನಡೆಸಿ, ಆ ಬಳಿಕ ಸಾರ್ವಜನಿಕ ಸಭೆ ನಡೆಸಲಾಗುವುದು. ಪಕ್ಷದ ಮುಖಂಡರು ಭಾಗವಹಿಸುತ್ತಾರೆ’ ಎಂದರು.

ದೇಶದಲ್ಲೇ ಅತ್ಯಂತ ದುಬಾರಿ ಜೀವನವನ್ನು ಈ ನಾಡಿನ ಜನ ನಡೆಸಬೇಕಾಗಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಸೇವಿಸುವ ಗಾಳಿ ಬಿಟ್ಟು ಉಳಿದೆಲ್ಲವುಗಳ ದರ ಏರಿಸಲಾಗಿದೆ
ಬಿ.ವೈ.ವಿಜಯೇಂದ್ರ ಅಧ್ಯಕ್ಷ ರಾಜ್ಯ ಬಿಜೆಪಿ

‘ಹಿಂದೂಗಳು ಏನು ತಪ್ಪು ಮಾಡಿದ್ದಾರೆ’

ರಾಜ್ಯ ಬಜೆಟ್‌ ಮೂಲಕ ಅಲ್ಪಸಂಖ್ಯಾತರಿಗೆ ಓಲೈಕೆ ಮಾತ್ರವಲ್ಲದೆ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಉನ್ನತ ಶಿಕ್ಷಣಕ್ಕೆ ವಿದೇಶಗಳಿಗೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ ₹20 ಲಕ್ಷ ಇದ್ದದ್ದನ್ನು ₹30 ಲಕ್ಷಕ್ಕೆ ಏರಿಸಿದ್ದಾರೆ. ಹಿಂದೂಗಳಲ್ಲಿನ ಹಿಂದುಳಿದ ಸಮುದಾಯಕ್ಕೆ ಸೇರಿದವರು ಯಾವ ತಪ್ಪು ಮಾಡಿದ್ದಾರೆ. ಅವರಿಗೆ ಈ ಸೌಲಭ್ಯ ಏಕಿಲ್ಲ? ಮುಸ್ಲಿಂ ಹೆಣ್ಣು ಮಕ್ಕಳ ಆತ್ಮರಕ್ಷಣೆ ತರಬೇತಿಗೆ ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಹಿಂದೂಗಳ ಹೆಣ್ಣು ಮಕ್ಕಳಿಗೆ ತರಬೇತಿ ಏಕಿಲ್ಲ? ಅವರೇನು ತಪ್ಪು ಮಾಡಿದ್ದಾರೆ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.