ADVERTISEMENT

ಉಪಚುನಾವಣೆಗೆ ₹ 750 ಕೋಟಿ ವೆಚ್ಚ: ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:30 IST
Last Updated 11 ಡಿಸೆಂಬರ್ 2019, 20:30 IST
   

ಹಾಸನ: ‘ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಾಗಿ, ಬಿಜೆಪಿ ಸರ್ಕಾರವು ಅಂದಾಜು ₹ 750 ಕೋಟಿ ವೆಚ್ಚ ಮಾಡಿದೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಬುಧವಾರ ಇಲ್ಲಿ ಆರೋಪಿಸಿದರು.

‘ಪ್ರತಿ ಕ್ಷೇತ್ರಕ್ಕೂ ತಲಾ ₹ 50 ರಿಂದ ₹ 60 ಕೋಟಿ ಖರ್ಚು ಮಾಡಲಾಗಿದೆ. ಸಚಿವರೇ ಪೊಲೀಸ್‌ ವಾಹನದಲ್ಲಿ ಹಣ ಸಾಗಿಸಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ. ಅಷ್ಟೊಂದು ಹಣ ಎಲ್ಲಿಂದ ಬಂತು ಹೇಳುವವರು ಇಲ್ಲ. ಅಧಿಕಾರಿಗಳೇ ಆಯೋಗವನ್ನು ನಿಯಂತ್ರಿಸುವ ಪರಿಸ್ಥಿತಿ ಇದೆ. ಅಪವಿತ್ರ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಜನರ ತೆರಿಗೆ ಹಣ ಬಳಸಿಕೊಳ್ಳಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘15 ಕ್ಷೇತ್ರಗಳಲ್ಲಿ ಜೆಡಿಎಸ್‌ ಒಂದೂ ಸ್ಥಾನ ಗೆದ್ದಿಲ್ಲ. ಆದರೆ, ಇಲ್ಲಿಗೇ ರಾಜಕೀಯ ಮುಗಿಯಲಿಲ್ಲ. 1989ರಲ್ಲಿ ಜೆಡಿಎಸ್‌ ಎರಡು ಸ್ಥಾನದಲ್ಲಷ್ಟೆ ಇತ್ತು. ಹೀಗಾಗಿ, ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಪಕ್ಷವನ್ನು ಮುಗಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿವೆ. ಬಿಜೆಪಿ ಜತೆ ಸೇರಿ 20–20 ಸರ್ಕಾರ ರಚಿಸಿ, ಎಚ್.ಡಿ.ಕುಮಾರಸ್ವಾಮಿ ತಪ್ಪು ಮಾಡಿದರು. ಪಕ್ಷ ಸಂಘಟನೆ ಮಾಡಿ 2023ರ ವೇಳೆಗೆ ಜೆಡಿಎಸ್‌ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.