ADVERTISEMENT

ಯಡಿಯೂರಪ್ಪ ನೀಡಿರುವ ರಾಜೀನಾಮೆ ಹೇಳಿಕೆ ಪಕ್ಷದ ಆದರ್ಶ ಕಾರ್ಯಕರ್ತರ ಲಕ್ಷಣ: ಕಟೀಲ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 6:39 IST
Last Updated 8 ಜೂನ್ 2021, 6:39 IST
ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್
ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್   

ಬಾಗಲಕೋಟೆ: ’ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಪಕ್ಷದ ಆದರ್ಶ ಕಾರ್ಯಕರ್ತರ ಲಕ್ಷಣ. ಬೇರೆಯವರಿಗೂ ಇದು ಪ್ರೇರಣೆಯಾಗಲು ಆ ರೀತಿ ಹೇಳಿಕೆ ನೀಡಿದ್ದಾರೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ನಾಯಕರ ಸಭೆಯಲ್ಲಿ ಆಗಲಿ, ಶಾಸಕಾಂಗ ಸಭೆ ಹಾಗೂ ಕೋರ್‌ಕಮಿಟಿ ಸಭೆಯಲ್ಲಿ ಎಲ್ಲಿಯೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

’ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪರ–ವಿರುದ್ಧ ಮಾತನಾಡುವರ ಬಗ್ಗೆ ಕ್ರಮ ಕೈಗೊಳ್ಳಲು ಪಕ್ಷದ ಶಿಸ್ತು ಸಮಿತಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ನಮ್ಮಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದ ಪದ್ಧತಿ ಇಲ್ಲ. ಪಕ್ಷಕ್ಕೆ ತನ್ನದೇ ಆದ ಸಂವಿಧಾನ ಇದ್ದು, ಅಶಿಸ್ತು ಸಹಿಸೊಲ್ಲ‘ ಎಂದು ಎಚ್ಚರಿಸಿದರು.

ADVERTISEMENT

ಶಿಸ್ತು ಉಲ್ಲಂಘಿಸಿದ ಕೆಲವರಿಗೆ ಈಗಾಗಲೇ ಮೊದಲ ನೋಟಿಸ್ ನೀಡಲಾಗಿದೆ. ಮೂರು ನೋಟಿಸ್‌ ನಂತರ ಕ್ರಮ ಕೈಗೊಳ್ಳುವ ಪರಿಪಾಟವಿದೆ. ಎಲ್ಲ ಬೆಳವಣಿಗೆ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಹೈಕಮಾಂಡ್ ಹೇಳಿದೆ ಎಂದರು.

’ಪಕ್ಷ ಅಧಿಕಾರದಲ್ಲಿ ಇದ್ದಾಗ ಇವೆಲ್ಲಾ ಸಹಜ. ಕೆಲವರು ನೋವು, ಭಾವನೆಗಳನ್ನು ಹಂಚಿಕೊಳ್ಳುವುದು ಇದ್ದದ್ದೇ. ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣವೂ ಹೌದು. ಮುಂದೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಇದ್ದು, ಅತ್ತ ಗಮನ ಹರಿಸಬೇಕಿದೆ. ಹೀಗಾಗಿ ಇಂತಹ ವಿಚಾರಗಳ ನಿಯಂತ್ರಿಸಲು ಶಿಸ್ತು ಸಮಿತಿ ರಚನೆಯಾಗಿದೆ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇನ್ನಷ್ಟು ಸುದ್ದಿಗಳು
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.