ADVERTISEMENT

ಬಿಜೆಪಿಯಲ್ಲಿ ‘ತಲ್ಲಣ‘ ಮೂಡಿಸಿದ ಸೋಲು: ಆತ್ಮಾವಲೋಕನಕ್ಕೆ ಸಕಾಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:17 IST
Last Updated 7 ನವೆಂಬರ್ 2018, 20:17 IST
   

ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಬಿಜೆಪಿ ಆಂತರಿಕ ವಲಯದಲ್ಲಿ ತಲ್ಲಣ ಮೂಡಿಸಿದೆ. ಅಷ್ಟೇ ಅಲ್ಲ, ಪಕ್ಷದ ಕೆಲವು ಹಿರಿಯ ನಾಯಕರು ‘ಆತ್ಮಾವಲೋಕನ ಮಾಡಲು ಇದು ಸಕಾಲ’ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಬಿ.ಎಸ್‌. ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಕಷ್ಟಪಟ್ಟು ಗೆಲ್ಲಿಸಿಕೊಳ್ಳಲು ಸಫಲರಾದರೂ ಬಳ್ಳಾರಿ ಬಿಜೆಪಿಯ ಕೈತಪ್ಪಿದೆ. ಜಮಖಂಡಿಯಲ್ಲಿ ಗೆಲ್ಲಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಹೀಗಾಗಿ, ಯಡಿಯೂರಪ್ಪನವರ ‘ನಾಯಕತ್ವ’, ಚುನಾವಣೆಗೆ ನಡೆಸಿದ ಸಿದ್ಧತೆ, ಪ್ರಚಾರ ವೈಖರಿ, ಉಳಿದ ನಾಯಕರ ನಿರಾಸಕ್ತಿ, ನೀಡಿದ ಗೊಂದಲದ ಹೇಳಿಕೆಗಳು ಪಕ್ಷದೊಳಗೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಉಪ ಚುನಾವಣೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ನೋವು, ಬೇಸರ, ಆಕ್ರೋಶ ಕಾಣಿಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಪಕ್ಷದ ಸೋಲಿಗೆ ಕಾರಣ ಹುಡುಕುವ ಕೆಲಸ ನಡೆದಿತ್ತು.

ADVERTISEMENT

ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎರಡು ಲೋಕಸಭೆ ಕ್ಷೇತ್ರಗಳಲ್ಲಿ (ಶಿವಮೊಗ್ಗ ಮತ್ತು‌ ಬಳ್ಳಾರಿ) ಗೆಲುವು ಖಚಿತ ಎಂದೇ ಬಿಜೆಪಿ ನಂಬಿತ್ತು. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಇದ್ದರೂ ಗೆಲುವು ಸಾಧ್ಯವಾಗಬಹುದೆಂಬ ನಂಬಿಕೆ ಇತ್ತು. ಆದರೆ, ಈ ನಿರೀಕ್ಷೆಗಳು ಉಲ್ಟಾ ಹೊಡೆದಿವೆ.

ಚುನಾವಣಾ ಫಲಿತಾಂಶವನ್ನು ಫೇಸ್‌ಬುಕ್‌ನಲ್ಲಿ ವಿಶ್ಲೇಷಿಸಿರುವ ಬಿಜೆಪಿ ಶಾಸಕ ಎಸ್‌. ಸುರೇಶ್‌ಕುಮಾರ್, ‘ಪ್ರಾಮಾಣಿಕ ಆತ್ಮಾ
ವಲೋಕನಕ್ಕೆ ಇದು ಸಕಾಲ’ ಎಂದಿದ್ದಾರೆ.

ಪಕ್ಷದ ಕಾರ್ಯಕರ್ತರ, ಅಭಿಮಾನಿಗಳ, ಹಿತೈಷಿಗಳ ಪೈಕಿ ಕೆಲವರ ಭಾವನೆಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ‘ಬ್ಲೇಮ್‌ ಗೇಮ್‌ಗಿಂತ ಆತ್ಮಾವಲೋಕನ ಹೆಚ್ಚು ಪರಿಣಾಮಕಾರಿ’ ಎಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದಾರೆ. ಶಾಸಕರಾದ ಸಿ.ಟಿ. ರವಿ ಮತ್ತು ಕೆ.ಎಸ್‌. ಈಶ್ವರಪ್ಪ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.