ADVERTISEMENT

ಬಂದಿಗಳ ಗುರುತಿಸುವಿಕೆಗೆ ತಿದ್ದುಪಡಿ ಮಸೂದೆ ಮಂಡನೆ

ಆರೋಪಿಗಳ ರಕ್ತ, ಡಿಎನ್‌ಎ ಮಾದರಿ ಸಂಗ್ರಹಿಸುವ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:50 IST
Last Updated 14 ಸೆಪ್ಟೆಂಬರ್ 2021, 17:50 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಶಾಂತಿ ಭಂಗ ಮತ್ತು ಹಿಂಸಾಚಾರದ ಪ್ರಕರಣಗಳಲ್ಲಿ ಆರೋಪಿಗಳ ರಕ್ತ, ಡಿಎನ್‌ಎ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿಂಗ್‌ ಮಾದರಿಯನ್ನು ಪಡೆದುಕೊಳ್ಳುವ ಸಂಬಂಧ ‘ಬಂದಿಗಳ ಗುರುತಿಸುವಿಕೆ(ತಿದ್ದುಪಡಿ) ಮಸೂದೆ’ 2021 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಸೂದೆ ಮಂಡಿಸಿದರು.

ಈ ಹಿಂದೆ ಆರೋಪಿಗಳ ಭಾವ ಚಿತ್ರ ಮತ್ತು ನೆಗೆಟಿವ್‌ ಮಾತ್ರ ಸಂಗ್ರಹಿಸಲಾಗುತ್ತಿತ್ತು. ಈಗ ಅಪರಾಧ ಪತ್ತೆ ತಂತ್ರಜ್ಞಾನ ಮುಂದುವರಿದಿ
ರುವುದರಿಂದ ಈ ಅಂಶಗಳನ್ನು ಸೇರಿಸಲಾಗಿದೆ.

ADVERTISEMENT

ಅಲ್ಲದೆ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ಜತೆಗೆ ಎಸ್ಪಿ, ಪೊಲೀಸ್‌ ಉಪ ಆಯುಕ್ತರಿಗೆ ಈ ಮಾದರಿಗಳನ್ನು ಸಂಗ್ರಹಿಸುವ ಅಧಿಕಾರ ನೀಡಲಾ ಗುವುದು. ನ್ಯಾಯಾಲಯ, ಜಿಲ್ಲಾ ಮ್ಯಾಜಿ ಸ್ಟ್ರೇಟ್‌ ಮತ್ತು ಪೊಲೀಸ್‌ ಉಪ ಆಯುಕ್ತರಿಂದ ನಿರ್ದಿಷ್ಟ ನಿರ್ದೇಶನ ಅಥವಾ ಆದೇಶ ಇಲ್ಲದಿದ್ದರೆ 10 ವರ್ಷಗಳ ಬಳಿಕ ಈ ಮಾದರಿಗಳನ್ನು ನಾಶ ಪಡಿಸಲು ಎಸ್ಪಿ ಮತ್ತು ಪೊಲೀಸ್‌ ಉಪ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ.

ಮಂಡನೆಯಾದ ಇತರ ಮಸೂದೆಗಳು

l ಸಾಕ್ಷಿಯ ಸಾಕ್ಷ್ಯವನ್ನು ಪಡೆಯುವಾಗ ಶ್ರವ್ಯ–ದೃಶ್ಯ ವಿದ್ಯುನ್ಮಾನ ವಿಧಾನಗಳ ಮೂಲಕವೂ ದಾಖಲಿಸಿಕೊಳ್ಳಲು ಅನುಕೂಲವಾಗಲು ‘ದಂಡ ಪ್ರಕ್ರಿಯಾ ಸಂಹಿತೆ ಮಸೂದೆ’ 2021 ಮಂಡಿಸಲಾಯಿತು.

lಬೆಂಗಳೂರು ನಗರದಲ್ಲಿ 1,200 ಚದರಡಿಗಳಿಗೆ ಕಡಿಮೆ ಇಲ್ಲದ ನಿವೇಶನದಲ್ಲಿ ಪ್ರತಿಯೊಬ್ಬರು ಮಳೆನೀರು ಕೊಯ್ಲು ವ್ಯವಸ್ಥೆ ಹೊಂದುವುದನ್ನು
ಕಡ್ಡಾಯಗೊಳಿಸಲು ‘ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ಮಸೂದೆ’ 2021 ಮಂಡಿಸಲಾಗಿದೆ.

l ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪಾಲನೆ, ಮೇಲ್ವಿಚಾರಣೆ ಮಾಡಲು ಮತ್ತು ನಿಯಮಿತವಾಗಿ ಪುನರ್‌ ಪರಿಶೀಲನಾ ವರದಿಯನ್ನು ಸಲ್ಲಿಸುವ ಕಾರ್ಯವನ್ನು ರಾಜ್ಯ ಲೆಕ್ಕಪತ್ರಗಳ ಇಲಾಖೆ ಬದಲಿಗೆ ಪಂಚಾಯತ್‌ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯನ್ನು ಸಕ್ಷಮ ಪ್ರಾಧಿಕಾರವನ್ನಾಗಿ ಮಾಡುವುದಕ್ಕೆ ಮಸೂದೆ ಮಂಡಿಸಲಾಯಿತು.

l‘ಬಂದೀಖಾನೆ ಮಂಡಳಿ’ ಸ್ಥಾಪನೆಗಾಗಿ ‘ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ಮಸೂದೆ’ 2021 ಮಂಡಿಸಲಾಯಿತು.

lಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಗಳಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸಲು ನಿರ್ದೇಶಕ ಮಂಡಳಿಯಲ್ಲಿ ಸರ್ಕಾರೇತರ ಸದಸ್ಯರ
ಸಂಖ್ಯೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಜಿಲ್ಲೆಯಿಂದ ಒಬ್ಬ ವ್ಯಕ್ತಿಗೆ ಬದಲು, ಪ್ರತಿ ಕಂದಾಯ ವಲಯದಿಂದ ಮೂವರು ವ್ಯಕ್ತಿಗಳಂತೆ, ಆದರೆ ಒಂದು ಜಿಲ್ಲೆಯಿಂದ ಒಬ್ಬ ವ್ಯಕ್ತಿಗಿಂತ ಹೆಚ್ಚು ಇರದಂತೆ ಸರ್ಕಾರೇತರ ಸದಸ್ಯರ ಒಟ್ಟು ಸಂಖ್ಯೆ 12 ಕ್ಕೆ ಕಡಿತ
ಗೊಳಿಸಲು ಮಸೂದೆ ಮಂಡಿಸಲಾಯಿತು.

ಪಂಚಾಯಿತಿ ಕ್ಷೇತ್ರ ಪುನರ್‌ವಿಂಗಡಣೆಗೆ ಆಯೋಗ

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಹಂತದಲ್ಲಿ ಕ್ಷೇತ್ರಗಳ ವಿಂಗಡಣೆಗೆ ಸಂಬಂಧಿಸಿದಂತೆ ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸಲು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌(ತಿದ್ದುಪಡಿ) ಮಸೂದೆ 2021 ಸರ್ಕಾರ ಮಂಡಿಸಿದೆ.

ಚುನಾವಣಾ ಆಯೋಗಕ್ಕಿದ್ದ ಈ ಅಧಿಕಾರ ಹಿಂದಕ್ಕೆ ಪಡೆದು ಆಯೋಗಕ್ಕೆ ನೀಡಲು ಈ ತಿದ್ದುಪಡಿ ತರಲಾಗುತ್ತಿದೆ.

ಮುದ್ರಾಂಕ ಸುಂಕ ಇಳಿಕೆಗೆ ಮಸೂದೆ

ರಾಜ್ಯದಲ್ಲಿ ₹35 ಲಕ್ಷದಿಂದ ₹45 ಲಕ್ಷ ನಡುವಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಸುಂಕವನ್ನು ಶೇ 5 ರಿಂದ ಶೇ 3 ಕ್ಕೆ ಇಳಿಸಲು ಕರ್ನಾಟಕ ಸ್ಟಾಂಪು (ತಿದ್ದುಪಡಿ)ಮಸೂದೆ ಮಂಡಿಸಲಾಯಿತು. ಕಳೆದ ಆಯವ್ಯಯದಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.