ADVERTISEMENT

ಯಾರೊಬ್ಬರೂ ಅರ್ಹರಿಲ್ಲ; ಕಿರಿಯ ಸಹಾಯಕರ ನೇಮಕಾತಿ ಪ್ರಕ್ರಿಯೆ ದಿಢೀರ್ ರದ್ದು

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:23 IST
Last Updated 31 ಮೇ 2019, 20:23 IST
   

ಬೆಂಗಳೂರು: ಬಿಎಂಟಿಸಿಯು ಕಿರಿಯ ಸಹಾಯಕ–ಕಂ–ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ದಿಢೀರ್ ರದ್ದುಗೊಳಿಸಿದೆ.

100 ಹುದ್ದೆಗಳ ನೇರ ನೇಮಕಾತಿಗೆ ಸಂಸ್ಥೆ 2018ರ ಮಾರ್ಚ್ 23ರಂದು ಅಧಿಸೂಚನೆ ಹೊರಡಿಸಿತ್ತು. ‍‍ಪಿಯುಸಿ ವಿದ್ಯಾರ್ಹತೆ ಜತೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 6 ತಿಂಗಳ ಕಂಪ್ಯೂಟರ್‌ ತರಬೇತಿ ಪಡೆದಿರಬೇಕು ಎಂದು ತಿಳಿಸಲಾಗಿತ್ತು. 26 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಜೂನ್‌ 10ರಂದು ಪರೀಕ್ಷೆಯನ್ನೂ ಬರೆದಿದ್ದರು.

ಮೂಲ ದಾಖಲಾತಿಗಳ ಪರಿಶೀಲನೆಗಾಗಿ 1:5 ಅನುಪಾತದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿತ್ತು. ಪರಿಶೀಲನೆ ನಡೆಸಿರುವ ಬಿಎಂಟಿಸಿ, ಇದೀಗ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಪರೀಕ್ಷೆ ಬರೆದು ಒಂದು ವರ್ಷದಿಂದ ಕಾಯುತ್ತಿದ್ದ ಅಭ್ಯರ್ಥಿಗಳು ಈ ಬೆಳವಣಿಗೆಯಿಂದ ನಿರಾಸೆಗೊಂಡಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ದಿಢೀರ್ ರದ್ದುಪಡಿಸಿದ್ದರಿಂದ ಅಸಮಾಧಾನಗೊಂಡ ಅಭ್ಯರ್ಥಿಗಳು ಬಿಎಂಟಿಸಿ ಕಚೇರಿಗೆ ಶುಕ್ರವಾರ ಬಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ADVERTISEMENT

‘ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದಲೇ ಪ್ರಮಾಣಪತ್ರ ಪಡೆದುಕೊಂಡಿದ್ದೇವೆ. ಆದರೆ, ಅದನ್ನು ಬಿಎಂಟಿಸಿ ಅಧಿಕಾರಿಗಳು ಒಪ್ಪುತ್ತಿಲ್ಲ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ತೋಡಿಕೊಂಡರು.

‘ಒಂದು ವರ್ಷದಿಂದ ನಮ್ಮನ್ನು ಕಾಯಿಸಿ ಈಗ ಪ್ರಕ್ರಿಯೆಯನ್ನೇ ರದ್ದುಪಡಿಸಲಾಗಿದೆ. ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಯಾರೂ ಅರ್ಹರಿಲ್ಲದಿದ್ದರೆ, ಪರೀಕ್ಷೆ ಬರೆದ ಉಳಿದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಬೇಕು. ಅದರಲ್ಲಿ ಅರ್ಹರಿದ್ದರೆ ನೇಮಕ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಿರುವುದು ಸರಿಯಲ್ಲ’ ಎಂದು ಮತ್ತೊಬ್ಬ ಅಭ್ಯರ್ಥಿ ಕಿಡಿಕಾರಿದರು.

ಯಾರೊಬ್ಬರೂ ಅರ್ಹರಿಲ್ಲ: ಎನ್‌.ವಿ.ಪ್ರಸಾದ್
‘ದಾಖಲಾತಿ ಪರಿಶೀಲನೆಗೆ ಬಂದಿದ್ದ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದಿರುವ ಪ್ರಮಾಣ ಹಾಜರುಪಡಿಸಲಿಲ್ಲ. ಹೀಗಾಗಿ, ಅರ್ಹರಿಲ್ಲ ಎಂದು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಸಾದ್ ಅವರು ತಿಳಿಸಿದರು.

‘ಕಿಯೋನಿಕ್ಸ್‌ ಸೇರಿದಂತೆ ನಿರ್ದಿಷ್ಟ ಸಂಸ್ಥೆಗಳಲ್ಲಿ ತರಬೇತಿ ಪಡೆದ ಪ್ರಮಾಣಪತ್ರಗಳನ್ನೇ ಕೇಳಲಾಗಿತ್ತು. ಸರ್ಕಾರದಿಂದ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ಪಡೆದ ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಸಿದ್ದಾರೆ.

ಅವುಗಳನ್ನು ಪರಿಗಣಿಸಿದರೆ ಉಳಿದ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇತ್ತು. ಹೀಗಾಗಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ.ಅಭ್ಯರ್ಥಿಗಳು ಪಾವತಿಸಿದ್ದ ಅರ್ಜಿ ಶುಲ್ಕವನ್ನು ವಾಪಸ್ ನೀಡಲಾಗುವುದು’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.