ADVERTISEMENT

ಹೆಚ್ಚುತ್ತಿರುವ ಕೋವಿಡ್‌: ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ಸಿಪಿಎಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 3:40 IST
Last Updated 16 ಜನವರಿ 2022, 3:40 IST

ಬೆಂಗಳೂರು: ‘ಸದ್ಯ ಬಿಎಂಟಿಸಿ ಬಸ್‌ಗಳಲ್ಲಿ ಅಂತರ ನಿಯಮ ಪಾಲನೆಯಾಗುತ್ತಿಲ್ಲ. ಬಸ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಈ ನಿಯಮ ಕಡ್ಡಾಯಗೊಳಿಸಿ ಸೋಂಕು ಹರಡುವಿವಿಕೆ ತಡೆಯಲು ಸರ್ಕಾರ ಮುಂದಾಗಬೇಕು’ ಎಂದುಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.

‘ನಗರದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದೆ. ಇದರಿಂದ ದುಡಿಯುವ ಜನರ ಬದುಕು ಬೀದಿಗೆ ಬೀಳುವ ಅಪಾಯ ಎದುರಾಗಿದೆ. ತಮ್ಮ ನಿತ್ಯದ ಕೆಲಸಗಳಿಗಾಗಿ ಪ್ರತಿನಿತ್ಯ 40 ಲಕ್ಷಕ್ಕೂ ಅಧಿಕ ಮಂದಿ ಬಿಎಂಟಿಸಿ ಬಸ್‌ ಸೇವೆ ಅವಲಂಬಿಸಿದ್ದಾರೆ. ಬಿಎಂಟಿಸಿಯು ಬಸ್‌ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಬೇಕು. ಜೊತೆಗೆ ಬಸ್‌ ಟ್ರಿಪ್‌ಗಳನ್ನು ಹೆಚ್ಚಿಸಿ ಇತರರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು. ಬಸ್‌ಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನೂ ಸಿಂಪಡಿಸಬೇಕು’ ಎಂದು ಆಗ್ರಹಿಸಿವೆ.

‘ಕೆಲ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಶ್ರಮಿಕ ವರ್ಗದವರು ಅಂತಹ ಬಸ್‌ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯ.ಇದರಿಂದ ಕೊರೊನಾ ಸೋಂಕು ವೇಗವಾಗಿ ಹರಡುವ ಅಪಾಯ ಎದುರಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಮಿತಿಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.