ADVERTISEMENT

ಸಿ.ಎಂ ಗಾದಿಗಾಗಿ ಶಾಸಕರ ಖರೀದಿ ಸಾಧ್ಯತೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:51 IST
Last Updated 2 ಜುಲೈ 2025, 15:51 IST
ಬಿ.ವೈ.ವಿಜಯೇಂದ್ರ 
ಬಿ.ವೈ.ವಿಜಯೇಂದ್ರ    

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದುಕೊಳ್ಳಲು ಭೂಮಿಕೆ ಸಿದ್ಧಪಡಿಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಸಂಬಂಧ ಸುರ್ಜೇವಾಲಾ ಅವರು ಕಾಂಗ್ರೆಸ್‌ ಶಾಸಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಹೆಚ್ಚಾಗಿದ್ದು, ಶಾಸಕರ ಖರೀದಿ ಸಾಧ್ಯತೆ ಹೆಚ್ಚಾಗಿದೆ ಎಂದರು.

ರಾಜ್ಯದಲ್ಲಿ ಆಡಳಿತಯಂತ್ರ ಕುಸಿದು ಹೋಗಿದೆ. ಭ್ರಷ್ಟಾಚಾರವೂ ಹೆಚ್ಚಾಗಿದೆ. ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿವೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವಾಗಿದೆ ಎಂದು ವಿಜಯೇಂದ್ರ ಹೇಳಿದರು.

ADVERTISEMENT

ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ ಅವರು ಡಿ.ಕೆ.ಶಿವಕುಮಾರ್ ಅವರಿಗೆ 100 ಶಾಸಕರ ಬೆಂಬಲ ಇದೆ, ಅವರೇ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಶಾಸಕರಾದ ಬಿ.ಆರ್‌.ಪಾಟೀಲ, ರಾಜು ಕಾಗೆ ಮತ್ತು ಇತರರು ಮುಖ್ಯಮಂತ್ರಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯವರು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಆಕಾಂಕ್ಷಿಗಳಿಂದ ಶಾಸಕರ ಖರೀದಿ ನಡೆಯುವ ಸಾಧ್ಯತೆ ಇರುವುದರಿಂದ ರಾಜ್ಯಪಾಲರು ಈ ವಿದ್ಯಮಾನಗಳ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಹಾಸನಕ್ಕೆ ಮಾತ್ರ ಲಸಿಕೆ ನೀಡಲಾಗಿದೆಯೇ?:

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 35ರಿಂದ 40 ಜನ ಸತ್ತಿದ್ದು, ಇದಕ್ಕೆ ಕೋವಿಡ್‌ ಲಸಿಕೆಯೂ ಕಾರಣ ಇರಬಹುದು ಎಂದು ಮುಖ್ಯಮಂತ್ರಿಯವರ ಮಾತಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಹಾಸನ ಜಿಲ್ಲೆಗೆ ಮಾತ್ರ ಕೋವಿಡ್‌ ಲಸಿಕೆ ನೀಡಲಾಗಿದೆಯೇ? ದೇಶದ ಕೋಟ್ಯಂತರ ಜನರಿಗೆ, ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆ ರಫ್ತು ಮಾಡಲಾಗಿದೆ. ಮುಖ್ಯಮಂತ್ರಿಯವರದು ಬೇಜವಾಬ್ದಾರಿ ಹೇಳಿಕೆ. ಹಾಸನದ ಸಾವುಗಳ ಸಂಬಂಧ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಮರ್ಪಕ ತನಿಖೆ ನಡೆಸಬೇಕಾಗಿದೆ ಎಂದು ಹೇಳಿದರು.

ಆರ್‌ಎಸ್ಎಸ್‌ ಅನ್ನು ನಿಷೇಧಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅದು ಅವರ ತಿರುಕನ ಕನಸು. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರೇ ನಂಬುವುದಿಲ್ಲ. ರಾಹುಲ್‌ ಮತ್ತು ಸೋನಿಯಾಗಾಂಧಿ ಅವರೂ ನಂಬುವುದಿಲ್ಲ ಎಂದು ವಿಜಯೇಂದ್ರ ಹೇಳಿದರು. 

ಸಿಎಂ ಬದಲಾವಣೆ ಖಚಿತ: ಅಶೋಕ

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು ಎಲ್ಲರೂ ಮುಖ್ಯಮಂತ್ರಿ ಆಗಲು ಪೈಪೋಟಿ ನಡೆಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಇರುತ್ತಾರೆ ಎಂಬುದನ್ನು ಹೈಕಮಾಂಡ್‌ ಹೇಳಬೇಕು. ಆದರೆ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿರುವ ಸಿದ್ದರಾಮಯ್ಯ ಅವರು ಪದೇ ಪದೇ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ ಅಭಿವೃದ್ಧಿ ಶೂನ್ಯವಾಗಿ ಕಾಂಗ್ರೆಸ್‌ ಶಾಸಕರೇ ಬೇಸರಗೊಂಡಿದ್ದಾರೆ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.