ಬೆಂಗಳೂರು: ಗ್ರಾಮೀಣ ಭಾಗದ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಜಲ್‌ಜೀವನ್ ಮಿಷನ್ ಬಹುಗ್ರಾಮ ಯೋಜನೆಯಡಿ 4 ಜಿಲ್ಲೆಗಳು ಮತ್ತು ಎರಡು ತಾಲ್ಲೂಕುಗಳ ಏಳು ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇದರ ಅಂದಾಜು ವೆಚ್ಚ ₹ 6,768.85 ಕೋಟಿ.
ಗುರುವಾರ ಸಚಿವ ಸಂಪುಟ ಸಭೆಯ ಬಳಿಕಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ಮಾಹಿತಿ ನೀಡಿದರು.
ಈ ಯೋಜನೆಯಿಂದ 4,647 ಗ್ರಾಮೀಣ ಜನವಸತಿಗಳ 51 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಅಲ್ಲದೆ, 27 ನಗರ ಪ್ರದೇಶಗಳ 6 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆ ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ಜಾರಿ ಆಗಲಿದೆ ಎಂದರು.
ಕಾರ್ಯಾರಂಭಗೊಂಡ 24 ರಿಂದ 30 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಇಷ್ಟು ದೊಡ್ಡ ಮೊತ್ತದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಿದರು.
ಯಾವ ಜಿಲ್ಲೆಗಳಿಗೆ ಯೋಜನೆಗಳು: ನಬಾರ್ಡ್‌ನ ಮೂಲ ಸೌಕರ್ಯ ಅಭಿವೃದ್ಧಿ ನೆರವು (ಎನ್‌ಐಡಿಎ) ಯೋಜನೆಯಡಿ ರಾಯಚೂರು ಜಿಲ್ಲೆಗೆ ₹1,988.01 ಕೋಟಿ, ವಿಜಯಪುರ ಜಿಲ್ಲೆ ಯೋಜನೆ– 1 ರ ಅಡಿ ₹1,431.48 ಕೋಟಿ, ವಿಜಯಪುರ ಜಿಲ್ಲೆ ಯೋಜನೆ– 2 ರ ಅಡಿ ₹954.51 ಕೋಟಿ, ಮಂಡ್ಯ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ₹690.36 ಕೋಟಿ, ಧಾರವಾಡ ಜಿಲ್ಲೆಯ ಯೋಜನೆಗೆ ₹1,032.44 ಕೋಟಿ. ನಬಾರ್ಡ್‌ನ ಆರ್‌ಐಡಿಎಫ್ ಯೋಜನೆಯಡಿ ಹೊಳಲ್ಕೆರೆ(ಚಿತ್ರದುರ್ಗ ಜಿಲ್ಲೆ) ಯೋಜನೆಗೆ ₹276 ಕೋಟಿ, ಬೈಂದೂರು (ಉಡುಪಿ ಜಿಲ್ಲೆ) ಯೋಜನೆಗೆ ₹396 ಕೋಟಿ. ಇವೆರಡೂ ಯೋಜನೆಗಳಿಗೆ ಒಟ್ಟು ₹6,768.85 ಕೋಟಿಗೆ ವೆಚ್ಚವಾಗಲಿದೆ.
ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು
*ಕರ್ನಾಟಕ ವಿದ್ಯುತ್ ಚಾಲಿತ ವಾಹನ ಮತ್ತು ಇಂಧನ ಶೇಖರಣೆ ನೀತಿ 2017 ಕ್ಕೆ ತಿದ್ದುಪಡಿಗೆ ಒಪ್ಪಿಗೆ. ಇದರಡಿ ಗರಿಷ್ಠ 50 ಎಕರೆಯಲ್ಲಿ ವಿದ್ಯುತ್ ಚಾಲಿತ ವಾಹನ ತಯಾರಿಕಾ ಘಟಕಸ್ಥಾಪಿಸಿದವರಿಗೆ ಐದು ಕಂತುಗಳಲ್ಲಿ ಶೇ 15 ರಷ್ಟು ಬಂಡವಾಳ ಸಹಾಯಧನ
* ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ 52 ಸೀಟುಗಳ ಹೆಚ್ಚಳ. ಇಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ₹46.20 ಕೋಟಿ, ಉಪಕರಣಗಳ ಖರೀದಿಗೆ ₹12.02 ಕೋಟಿಗೆ ಆಡಳಿತಾತ್ಮಕ ಅನುಮೋದನೆ
* ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣಹಳ್ಳಿಯಲ್ಲಿ ಹೋಂಡಾ ಆಕ್ಟಿವಾ ಕಂಪನಿಯ ಘಟಕ ಸ್ಥಾಪನೆಗೆ 18.07 ಎಕರೆ ಗೋಮಾಳ ಜಮೀನು
* ಅಣ್ಣಿಗೆರೆ, ಸುರಪುರ, ಶಹಾಪುರ, ಶಿವಮೊಗ್ಗ, ಹೊನ್ನಾಳಿಯಲ್ಲಿ ಕುಡಿಯುವ ನೀರು ಯೋಜನೆಗೆ ₹770 ಕೋಟಿ
* ಸಿಂಗಸಂದ್ರದಲ್ಲಿ ₹75 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಮುಚ್ಛಯ ನಿರ್ಮಾಣ
* ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ರಸ್ತೆಯಿಂದ ಉತ್ತರಹಳ್ಳಿ ರಸ್ತೆವರೆಗೆ ₹25.7 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್
* ಹಾಸನ ನಗರದಲ್ಲಿರುವ ಚನ್ನಪಟ್ಟಣ ಕೆರೆ ಸೇರಿ ಪ್ರಮುಖ ಕೆರೆಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ₹144 ಕೋಟಿ ಕಾಮಗಾರಿಯ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
ಅನಾಥ ಮಕ್ಕಳಿಗೂ ಪ್ಯಾಕೇಜ್ ಚರ್ಚೆ
ಕೋವಿಡ್ ಸಂದರ್ಭದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ವಿಶೇಷ ಪ್ಯಾಕೇಜ್ ನೀಡುವ ವಿಚಾರ ಸಂಪುಟದಲ್ಲಿ ಚರ್ಚೆ ನಡೆದಿದೆ.
ಕೇಂದ್ರದಿಂದ ಈ ಸಂಬಂಧ ಮಾರ್ಗಸೂಚಿ ಬರಲಿದ್ದು, ಆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.
‘ಎಲ್ಲ ವರ್ಗದ ಬಡವರಿಗೂ ಪ್ಯಾಕೇಜ್ ಅಡಿ ಪರಿಹಾರ ಸಿಕ್ಕಿಲ್ಲ. ಸಂಕಷ್ಟದಲ್ಲಿದ್ದೂ ಸಿಗದವರಿಗೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಹಲವು ಸಚಿವರು ಸಭೆಯಲ್ಲಿ ಪ್ರತಿಪಾದಿಸಿದರು.
ಇದಕ್ಕೆ ಸಮ್ಮತಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ವಿಶೇಷ ವಾರ್ಡ್
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಕಾರಣ ಎಲ್ಲ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ವಿಶೇಷ ವಾರ್ಡ್‌ಗಳನ್ನು ತೆರೆಯಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ವಿಶೇಷ ವಾರ್ಡ್‌ಗಳ ಜತೆಗೆ ತುರ್ತು ನಿಗಾ ಘಟಕಗಳನ್ನೂ ಸ್ಥಾಪಿಸಲಾಗುವುದು. ಕಪ್ಪು ಶಿಲೀಂಧ್ರ ಪ್ರಕರಣಗಳು ಹುಬ್ಬಳ್ಳಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ವರದಿಯಾಗುತ್ತಿರುವುದರಿಂದ, ಇದಕ್ಕೆ ಸಂಬಂಧಿಸಿದ ಔಷಧಿಯನ್ನು ಅಗತ್ಯ ಪ್ರಮಾಣದಲ್ಲಿ ಕಳುಹಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.