ADVERTISEMENT

ಬಾಂಬ್‌ ಬೆದರಿಕೆ: ರಾಜ್ಯದಾದ್ಯಂತ ಶೋಧ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:46 IST
Last Updated 22 ಫೆಬ್ರುವರಿ 2019, 19:46 IST

ಬೆಂಗಳೂರು: ರೈಲ್ವೆ ಜಂಕ್ಷನ್‌ನಲ್ಲಿ ಬಾಂಬ್‌ ಇಟ್ಟಿರುವುದಾಗಿ ಅಪರಿಚಿತನೊಬ್ಬ ಕರೆ ಮಾಡಿ ಬೆದರಿಸಿದ್ದರಿಂದಾಗಿ, ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲಿ ಶುಕ್ರವಾರ ಶೋಧ ನಡೆಸಲಾಯಿತು.

ಪೊಲೀಸ್ ನಿಯಂತ್ರಣ ಕೊಠಡಿ–100ಕ್ಕೆ ನಸುಕಿನ 1.30 ಗಂಟೆ ಸುಮಾರಿಗೆ ಕರೆ ಮಾಡಿದ್ದ ಅಪರಿಚಿತ, ‘ರಾಜ್ಯದ ರೈಲ್ವೆ ಜಂಕ್ಷನ್‌ ಒಂದರಲ್ಲಿ ಬಾಂಬ್‌ ಇಟ್ಟಿದ್ದೇನೆ. ಅದು ಯಾವುದೆಂದು ಹೇಳುವುದಿಲ್ಲ. 45 ನಿಮಿಷದಲ್ಲಿ ಆ ಬಾಂಬ್‌ ಸ್ಫೋಟಗೊಳ್ಳಲಿದೆ’ ಎಂದು ಬೆದರಿಕೆ ಹಾಕಿದ್ದ. ಗಾಬರಿಗೊಂಡ ಕೊಠಡಿ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಎಚ್ಚೆತ್ತ ಪೊಲೀಸರು, ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್‌) ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣ ಹಾಗೂ ಯಶವಂತಪುರ ಜಂಕ್ಷನ್‌ನಲ್ಲಿ ಶೋಧ ನಡೆಸಿದರು. ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದರು.

ADVERTISEMENT

ದಾವಣಗೆರೆ, ತುಮಕೂರು, ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ರಾಜ್ಯದ ಎಲ್ಲ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲೂ ತಪಾಸಣೆ ನಡೆಸಲಾಯಿತು. ಯಾವುದೇ ರೀತಿಯ ಬಾಂಬ್‌ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಇದೊಂದು ಹುಸಿ ಕರೆ ಎಂದು ಪೊಲೀಸರು, ಮಧ್ಯಾಹ್ನ ಘೋಷಿಸಿದರು.

‘ಕರೆ ಮಾಡಿದ್ದ ವ್ಯಕ್ತಿ, ಬಾಂಬ್‌ ಇಟ್ಟಿರುವ ಸ್ಥಳವನ್ನು ನಿಖರವಾಗಿ ಹೇಳಿರಲಿಲ್ಲ. ಹೀಗಾಗಿ, ರಾಜ್ಯದ ಎಲ್ಲ ನಿಲ್ದಾಣಗಳಲ್ಲೂ ಶೋಧ ನಡೆಸಬೇಕಾಯಿತು’ ಎಂದು ಬೆಂಗಳೂರು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಂಬ್ ಬೆದರಿಕೆ ಕರೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕರೆ ಮಾಡಿದ್ದ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.