ಬೆಂಗಳೂರು: ಕಾಂಗ್ರೆಸ್‌ಗೆ ಬದ್ಧತೆ ಇದ್ದರೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು. ಒಳ ಮೀಸಲಾತಿ ಆಧಾರದಲ್ಲೇ ನೇಮಕಾತಿ, ಬಡ್ತಿ ನೀಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ 2013ರಿಂದಲೂ ಕಾಂಗ್ರೆಸ್ ಹೇಳುತ್ತಾ ಬಂದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಹೊಸ ನಾಟಕವಾಡುತ್ತಿದೆ ಎಂದು ದೂರಿದರು.
ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಸರಿಯಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲು ಬಿಡುಗಡೆ ಮಾಡದೇ ಕೇಂದ್ರದ ಅನುದಾನ ಕುರಿತು ಸುಳ್ಳು ಹೇಳುತ್ತಿದ್ದಾರೆ. ಕೇಂದ್ರದ ಕೆಲವು ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಹಾಗಾಗಿ, ಇವರು ರಾಜ್ಯಕ್ಕೆ ಕಡಿಮೆ ಅನುದಾನ ಬರುತ್ತಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 14ನೇ ಹಣಕಾಸಿಗಿಂತ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ₹1 ಲಕ್ಷ ಕೊಟಿ ಹೆಚ್ಚಿಗೆ ಬಂದಿದೆ. ಆಯುಷ್ಮಾನ್ ಭಾರತ ಯೊಜನೆಯಲ್ಲೇ 62 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.