ADVERTISEMENT

‘ಬೂಕನಕೆರೆ ಸಮಗ್ರ ಅಭಿವೃದ್ಧಿಗೆ ಬದ್ಧ’

ಹುಟ್ಟೂರಿನಲ್ಲಿ ಮನೆದೇವರ ದರ್ಶನ, ಚೆಲುವನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:55 IST
Last Updated 27 ಜುಲೈ 2019, 19:55 IST
   

ಮಂಡ್ಯ: ’ಬೂಕನಕೆರೆಯ ಸಮಗ್ರ ಅಭಿವೃದ್ಧಿಗೆ ಬದ್ಧ ಇರುವುದಾಗಿ’ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಹುಟ್ಟೂರಾದ ಕೆ.ಆರ್‌.ಪೇಟೆ ತಾಲ್ಲೂಕು ಬೂಕನಕೆರೆಗೆ ಶನಿವಾರ ಭೇಟಿ ನೀಡಿದ ಅವರು, ಮನೆದೇವರು ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

‘ಹುಟ್ಟೂರಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿರುವುದು ನನ್ನಲ್ಲಿ ನವ ಚೈತನ್ಯ ಮೂಡಿಸಿದೆ. ನಮ್ಮ ತಂದೆಯವರು ಗವಿಮಠದ ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ದೇವರ ಸೇವೆ ಮಾಡುತ್ತಿದ್ದರು’ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.

ಅವಧಿ ಪೂರ್ಣಗೊಳಿಸಲು ಆಶೀರ್ವಾದ ಬೇಡಿದ ಸಿ.ಎಂ: ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ, ‘ಮುಖ್ಯಮಂತ್ರಿಯಾಗಿ ಅವಧಿಪೂರ್ಣಗೊಳಿಸುವಂತೆ ಆಶೀರ್ವಾದ ಬೇಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ದೇವರ ಕೃಪೆಯಿಂದ ಯಾವುದೇ ವಿಘ್ನ ಇಲ್ಲದಂತೆ ಜನಪರ ಆಡಳಿತ ನೀಡುತ್ತೇನೆ’ ಎಂದರು.

ADVERTISEMENT

‘ಮೇಲುಕೋಟೆ ಕ್ಷೇತ್ರದಲ್ಲಿ ದಾಸೋಹ ಭವನದ ಕೊರತೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಆಗಸ್ಟ್‌ 2ರಂದು ಜಿಲ್ಲಾಧಿಕಾರಿಗಳ ಸಭೆ ಇದ್ದು ಈ ಬಗ್ಗೆ ಚರ್ಚಿಸಲಾಗುವುದು. ದಾಸೋಹ ಭವನಕ್ಕೆ ₹ 2 ಕೋಟಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಹುಟ್ಟೂರಿನಲ್ಲಿ ಸಂಭ್ರಮ: ಬೂಕನಕೆರೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಗ್ರಾಮಸ್ಥರು ತಳಿರು, ತೋರಣ ಕಟ್ಟಿ ಊರಿನ ಮಗನಿಗೆ ಸ್ವಾಗತ ಕೋರಿದರು. ಮೊದಲು, ಮನೆ ದೇವರು ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದುಗೆಯ ದರ್ಶನ ಪಡೆದ ಯಡಿಯೂರಪ್ಪ, ನಂತರ ಗ್ರಾಮದೇವತೆ ಗೋಗಾಲಮ್ಮದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ತಮ್ಮ ಸಹೋದರ ದಿವಂಗತ ಮಹದೇವಪ್ಪ ಅವರ ಮನೆಗೆ ತೆರಳಿ, ಅತ್ತಿಗೆ ಶಾರದಮ್ಮ ಅವರ ಕಾಲಿಗೆ ನಮಸ್ಕರಿಸಿದರು. ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ ಇದ್ದರು.

ಮಹಿಳೆಯ ಸಮಸ್ಯೆ ಆಲಿಸಿದ ಸಿ.ಎಂ

ನಿತ್ರಾಣ ಸ್ಥಿತಿಯಲ್ಲಿದ್ದ ಮೇಲುಕೋಟೆಯ ಜಯಲಕ್ಷ್ಮಿ, ತಮ್ಮ ಅಂಗವಿಕಲ ಮಗನನ್ನು ಕರೆತಂದು ಮುಖ್ಯಮಂತ್ರಿಗಳ ಬಳಿ ಸಹಾಯ ಕೇಳಿದರು. ಅಂಗವಿಕಲರ ಮಾಸಾಶನ ₹ 1 ಸಾವಿರ ಇದ್ದರೂ ಕಳೆದ ನಾಲ್ಕು ವರ್ಷದಿಂದ ಕೇವಲ₹ 500 ನೀಡಲಾಗುತ್ತಿದೆ ಎಂದು ದೂರಿದರು. ಅಧಿಕಾರಿಗಳನ್ನು ಕರೆದ ಯಡಿಯೂರಪ್ಪ, ಮಹಿಳೆಗೆ ತಕ್ಷಣ ₹ 1 ಸಾವಿರ ಮಾಸಾಶನ ಕೊಡಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.