ಕುಷ್ಟಗಿ: ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯಲ್ಲಿ ಹೊಸದಾಗಿ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ರದ್ದುಪಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಕೆಲವರು ಈ ಅವಕಾಶದ ದುರುಪಯೋಗಕ್ಕೆ ಮುಂದಾಗಿದ್ದರೆ ಇನ್ನೂ ಕೆಲವರು ಅನಗತ್ಯ ತೊಂದರೆಗೆ ಒಳಗಾಗುತ್ತಿರುವುದು ಕಂಡು ಬಂದಿದೆ.
ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬಾಪೂಜಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಡಿ.3 ರಿಂದ ಅವಕಾಶ ಕಲ್ಪಿಸಿತ್ತು. ಬಂದ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳಿಗೆ ಅಗತ್ಯವಾಗಿದ್ದ ಲಾಗಿನ್ ಕ್ರಿಯೇಟ್ ಆಗಿದ್ದೇ 19 ದಿನಗಳ ನಂತರ (ಡಿ.21ಕ್ಕೆ). ಹಾಗಾಗಿ ಆನ್‌ಲೈನ್‌ದಲ್ಲಿ ಪಡಿತರದಾರರು ಹೆಸರು ರದ್ದುಪಡಿಸುವ, ಸೇರ್ಪಡೆಗೊಳಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲಸಿ ಅನುಮೋದನೆ ನೀಡುವಲ್ಲಿ ಬಹಳಷ್ಟು ವಿಳಂಬವಾಗುತ್ತಿದೆ. ಇನ್ನೊಂದೆಡೆ ಅರ್ಜಿ ಸಲ್ಲಿಸುವುದಕ್ಕೆ ಡಿ.31ರ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ ಇದೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸಿದ ಬಿಪಿಎಲ್ ಪಡಿತರದಾರರು ತಮ್ಮ ಅರ್ಜಿ ಇತ್ಯರ್ಥಪಡಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ.
ಸುಮಾರು 2000 ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವ ಅಥವಾ ತಿರಸ್ಕರಿಸುವ ಕೆಲಸ ಆಹಾರ ಇಲಾಖೆಯಲ್ಲಿ ನಿಧಾನಗತಿಯಲ್ಲಿ ಸಾಗಿದ್ದು ಗೊತ್ತಾಗಿದೆ. ಅನಾರೋಗ್ಯ ಮತ್ತಿತರೆ ಗಂಭೀರ ಸಮಸ್ಯೆಗಳಿದ್ದವರಿಗೆ ಈ ಅನುಕೂಲ ಕಲ್ಪಿಸಲಾಗಿತ್ತಾದರೂ ಪಡುತರದಾರರು ಅನಗತ್ಯವಾಗಿ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನಿಯಮಗಳ ಪ್ರಕಾರ ಸೇರ್ಪಡೆ ಅಥವಾ ರದ್ದತಿ ವಿಷಯದಲ್ಲಿ ಕಡ್ಡಾಯವಾಗಿ ಸ್ಥಾನಿಕ ಪರಿಶೀಲನೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಸೇರ್ಪಡೆ ಮತ್ತು ರದ್ದತಿಗೆ ಅರ್ಜಿಯಲ್ಲಿ ಯಾವುದೇ ಕಾರಣ ತಿಳಿಸಿರುವುದಿಲ್ಲ. ಅನೇಕ ಜನರು ಅರ್ಜಿ ಸಲ್ಲಿಸಿ ನೇರವಾಗಿ ಕಚೇರಿಗೆ ಬಂದು ತಕ್ಷಣ ವಿಲೇವಾರಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಚೇರಿ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
2023ರ ಆಗಸ್ಟ್ ವರೆಗೆ ಮಾತ್ರ ಹೊಸ ಬಿಪಿಎಲ್ ಕಾರ್ಡ್ ನೀಡಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಅಂಥ ಅರ್ಜಿಗಳ ವಿಲೇವಾರಿಯನ್ನು ಇನ್ನೂ ಕಾಯ್ದಿರಿಸಲಾಗಿದೆ. ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸ್ಥಾನಿಕ ಪರಿಶೀಲನೆ ನಂತರವಷ್ಟೆ ಹೊಸ ಕಾರ್ಡ್ ಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಮಗ ‘ಮಂಗಳಮುಖಿ’ ಎಂದ ತಂದೆ
ಬಿಪಿಎಲ್ ಪಡಿತರ ಚೀಟಿಗಳಲ್ಲಿನ ಹೆಸರುಗಳ ರದ್ದತಿಗೆ ಬಹಳಷ್ಟು ಜನ ಮುಂದಾಗಿದ್ದಲ್ಲದೇ ರದ್ದತಿಗೆ ನೀಡುತ್ತಿರುವ ಕಾರಣಗಳು ಅಚ್ಚರಿ ಮೂಡಿಸಿದ್ದು ಮತ್ತೊಂದು ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ತಂತ್ರಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ತಂದೆಯೊಬ್ಬ ತನ್ನ 7-8 ವರ್ಷದ ಮಕ್ಕಳ ಹೆಸರುಗಳನ್ನೇ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದಾನೆ. ಪ್ರತ್ಯೇಕ ಕುಟುಂಬ ಎಂಬುದನ್ನು ಬಿಂಬಿಸಲು ಮನೆಯಲ್ಲಿನ ಇತರ ಹೆಸರುಗಳೊಂದಿಗೆ ಮಕ್ಕಳ ಹೆಸರುಗಳನ್ನೂ ಸೇರಿಸಿ ಮತ್ತೊಂದು ಕಾರ್ಡ್ ಪಡೆಯುವ ಹುನ್ನಾರ ಅದರಲ್ಲಿದೆ ಎನ್ನುತ್ತದೆ ಆಹಾರ ಇಲಾಖೆ. ಅಷ್ಟೇ ಅಲ್ಲ ಇನ್ನೊಬ್ಬ ತಂದೆ ತನ್ನ ವಯಸ್ಕ ಮಗನ ಹೆಸರು ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದಾನೆ. ಬೇರೆ ಬಿಪಿಎಲ್ ಕಾರ್ಡ್ ಪಡೆಯುವುದಕ್ಕಾಗಿ ತನ್ನ ಮಗ 'ಮಂಗಳಮುಖಿ'ಯಾಗಿದ್ದು ಪ್ರತ್ಯೇಕವಾಗಿದ್ದು, ಆತನ ಹೆಸರು ರದ್ದುಪಡಿಸಬೇಕಿದೆ ಎಂದು ಹೇಳಿದ್ದು ಕೇಳಿ ಆಹಾರ ಇಲಾಖೆ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಅರ್ಹರಿದ್ದರೂ ರದ್ದತಿಗೆ ನಿರಾಕರಣೆ
ಪಡಿತರ ಚೀಟಿಯಲ್ಲಿನ ಹೆಸರನ್ನು ರದ್ದುಪಡಿಸುವುದು ಅಗತ್ಯವಾಗಿದ್ದರೂ ಅಧಿಕಾರಿಗಳು ಪುರುಷರ ಹೆಸರುಗಳನ್ನು ರದ್ದುಪಡಿಸಲು ನಿರಾಕರಿಸುತ್ತಿದ್ದಾರೆ. ಕೇವಲ ಮಹಿಳೆಯರ ಹೆಸರುಗಳನ್ನಷ್ಟೇ ರದ್ದುಪಡಿಸಲು ಮುಂದಾಗುತ್ತಾರೆ. ಪುರುಷರ ಹೆಸರು ರದ್ದುಪಡಿಸಿದರೆ ಮುಂದೆ ಅವರು ಹೊಸ ಬಿಪಿಎಲ್‌ಗೆ ಅರ್ಜಿ ಸಲ್ಲಿಸುತ್ತಾರೆ ಎಂಬ ಕಾರಣಕ್ಕೆ ಸರ್ಕಾರವೇ ಅಧಿಕಾರಿಗಳಿಗೆ ಈ ಸೂಚನೆ ನೀಡಿದೆ ಎಂಬ ಆರೋಪವೂ ಕೇಳಿಬಂದಿತು.
ಈ ಕುರಿತು ಅಳಲು ತೋಡಿಕೊಂಡ ತಾಲ್ಲೂಕಿನ ತಾವರಗೇರಾದ ನಾಗರಾಜ ಎಂಬುವವರು ಅಂತರ್ಜಾತಿ ವಿವಾಹ ಆಗಿದ್ದರಿಂದ ಮನೆಯವರಿಂದ ದೂರ ಇದ್ದು, ಅದೇ ರೀತಿ ಪತ್ನಿಯೂ ಸಹ ತವರಿನಿಂದ ದೂರ ಉಳಿದಿದ್ದಾರೆ. ಹಾಗಾಗಿ ಕುಟುಂಬ ನಿರ್ವಹಣೆಯ ಸಂಕಷ್ಟ ದಲ್ಲಿದ್ದೇವೆ. ತಂದೆಯ ಪಡಿತರ ಚೀಟಿಯಲ್ಲಿರುವ ತಮ್ಮ ಹೆಸರು ರದ್ದಾದರೆ ಮಾತ್ರ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.