ADVERTISEMENT

ಲಂಚ ಪ್ರಕರಣ: ರಾಜ್ಯ ಮಾಹಿತಿ ಆಯುಕ್ತರ ಅಮಾನತು ರದ್ದು

ರವೀಂದ್ರ ಗುರುನಾಥ ಡಾಕಪ್ಪ ರಾಜೀನಾಮೆ ಒಪ್ಪಿ ರಾಜ್ಯಪಾಲ ಆದೇಶ

ಜಯಸಿಂಹ ಆರ್.
Published 27 ಏಪ್ರಿಲ್ 2025, 22:23 IST
Last Updated 27 ಏಪ್ರಿಲ್ 2025, 22:23 IST
ರವೀಂದ್ರ ಗುರುನಾಥ ಡಾಕಪ್ಪ
ರವೀಂದ್ರ ಗುರುನಾಥ ಡಾಕಪ್ಪ   

ಬೆಂಗಳೂರು: ₹1 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರ ಅಮಾನತು ಆದೇಶವನ್ನು ತೆರವು ಮಾಡಿರುವ ರಾಜ್ಯಪಾಲರು, ಅದೇ ದಿನ ರಾಜೀನಾಮೆ ಅಂಗೀಕರಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯ ಕಪ್ಪು ಪಟ್ಟಿಯಿಂದ ಅರ್ಜಿದಾರರೊಬ್ಬರ ಹೆಸರನ್ನು ಕೈಬಿಡಲು, ಮಾರ್ಚ್‌ 27ರಂದು ರವೀಂದ್ರ ಅವರು ₹1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದ ಸಂಬಂಧ ಹಲವು ದಿನಗಳವರೆಗೆ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದರು.

ರವೀಂದ್ರ ಅವರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ಅವರನ್ನು ಸೇವೆಯಿಂದ ವಜಾ ಮಾಡುವಂತೆ ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಅದರಂತೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಮಾರ್ಚ್‌ 27ರಿಂದ ಅನ್ವಯವಾಗುವಂತೆ, ಅವರನ್ನು ಏಪ್ರಿಲ್‌ 1ರಂದು ಅಮಾನತು ಮಾಡಿದ್ದರು.

ADVERTISEMENT

ಮಾಹಿತಿ ಹಕ್ಕು ಕಾಯ್ದೆಯ 17(2)ನೇ ಸೆಕ್ಷನ್‌ ಪ್ರಕಾರ, ಇಂತಹ ಪ್ರಕರಣಗಳನ್ನು ರಾಜ್ಯಪಾಲರು ಸುಪ್ರೀಂ ಕೋರ್ಟ್‌ನ ತನಿಖೆಗೆ ಕಳುಹಿಸಬೇಕು. ಆದರೆ, ರಾಜ್ಯಪಾಲರು ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಅವಗಾಹನೆಗೆ ಕಳುಹಿಸಿರಲಿಲ್ಲ. ರವೀಂದ್ರ ಅವರ ಅಧಿಕಾರದ ಅವಧಿ ಏಪ್ರಿಲ್‌ 20ಕ್ಕೆ ಕೊನೆಯಾಗುತ್ತಿತ್ತು.

‘ಅವರ ಕರ್ತವ್ಯಾವಧಿ 20 ದಿನಗಳಲ್ಲಿ ಮುಗಿಯುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ತನಿಖೆಗೆ ಕಳುಹಿಸಲು ಕಾಲಾವಕಾಶವಿಲ್ಲ. ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ದಾಖಲೆಗಳಲ್ಲಿ ಇದೆ. ಹೀಗಾಗಿ ಇದು ಮಾಹಿತಿ ಹಕ್ಕು ಕಾಯ್ದೆಯ 17(2)ನೇ ಸೆಕ್ಷನ್‌ ಅಡಿ ಅಮಾನತು ಆದೇಶ ಹೊರಡಿಸಲು ತಕ್ಕುದಾದ ಪ್ರಕರಣವಾಗಿದೆ’ ಎಂದಿದ್ದರು. 

ಅಲ್ಲದೆ ರವೀಂದ್ರ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ವಿವರಣೆ ನೀಡುವಂತೆ ರಾಜ್ಯಪಾಲರು ನೋಟಿಸ್ ನೀಡಿದ್ದರು. ವಿವರಣೆ ನೀಡಲು, ತಮಗೆ ಜಾಮೀನು ದೊರೆತ ನಂತರ 15 ದಿನ ಕಾಲಾವಕಾಶ ಬೇಕು ಎಂದು ರವೀಂದ್ರ ಅವರು ಕೋರಿದ್ದರು. ಅದನ್ನು ತಿರಸ್ಕರಿಸಿದ್ದ ರಾಜ್ಯಪಾಲರು ಏಪ್ರಿಲ್‌ 16ರ ಒಳಗೆ ವಿವರಣೆ ನೀಡಿ ಎಂದು ಏಪ್ರಿಲ್‌ 2ರಂದು ಸೂಚಿಸಿದ್ದರು.

ರವೀಂದ್ರ ಅವರು ಏಪ್ರಿಲ್‌ 11ರಂದು ವಿವರಣೆ ನೀಡಿದ್ದರು. ಜತೆಗೆ ಏಪ್ರಿಲ್‌ 16ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ವಿವರಣೆ ಮತ್ತು ರಾಜೀನಾಮೆ ಎರಡನ್ನೂ ಒಪ್ಪಿಕೊಂಡಿರುವ ರಾಜ್ಯಪಾಲರು, ಅಮಾನತು ಆದೇಶವನ್ನು ತೆರವು ಮಾಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ 17(2)ನೇ ಸೆಕ್ಷನ್‌ ಪ್ರಕಾರ, ಸುಪ್ರೀಂ ಕೋರ್ಟ್‌ನ ತನಿಖಾ ವರದಿಯ ಆಧಾರದಲ್ಲೇ ರಾಜ್ಯಪಾಲರು ಇಂತಹ ಆದೇಶ ಹೊರಡಿಸಬೇಕು. ಆದರೆ ಅಮಾನತು ರದ್ದತಿ ಆದೇಶ ಹೊರಡಿಸುವಾಗಲೂ ರಾಜ್ಯಪಾಲರು ಇದನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದಿಲ್ಲ.

ಬದಲಿಗೆ, ‘ಆರೋಪಿಯ ಕರ್ತವ್ಯಾವಧಿ ಮುಗಿಯಲು ಇನ್ನು ಮೂರು ದಿನಗಳಷ್ಟೇ ಉಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನ ಅವಗಾಹನೆಗೆ ಕಳುಹಿಸಿ, ವರದಿ ಪಡೆಯಲು ಅವಕಾಶವಿಲ್ಲ’ ಎಂದು ರಾಜ್ಯಪಾಲರು ಆದೇಶದಲ್ಲಿ ವಿವರಿಸಿದ್ದಾರೆ.

‘ಈ ಪ್ರಕರಣವು ಇನ್ನೂ ತನಿಖೆಯ ಹಂತದಲ್ಲಿ ಇದೆ. ಅಲ್ಲಿಯವರೆಗೆ ರವೀಂದ್ರ ಅವರು ಆರೋಪಿ ಅಷ್ಟೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ಅಮಾನತು ಮಾಡುವುದು, ಸಾಬೀತಾಗದ ತಪ್ಪಿಗೆ ಶಿಕ್ಷೆ ನೀಡಿದಂತಾಗುತ್ತದೆ. ಹೀಗಾಗಿ ಅವರ ಅಮಾನತು ಆದೇಶವನ್ನು ತೆರವು ಮಾಡುತ್ತಿದ್ದೇನೆ’ ಎಂದಿದ್ದಾರೆ. ಜತೆಗೆ ರವೀಂದ್ರ ಅವರ ರಾಜನಾಮೆಯನ್ನೂ ಒಪ್ಪಿಕೊಂಡು, ಕರ್ತವ್ಯದಿಂದ ಅವರನ್ನು ಬಿಡುಗಡೆ ಮಾಡಿದ್ದಾರೆ.

ರಾಜ್ಯಪಾಲರ ಕ್ರಮಕ್ಕೆ ಆಕ್ಷೇಪ

ರಾಜ್ಯಪಾಲರ ಈ ಕ್ರಮಕ್ಕೆ ರಾಜ್ಯದ ಹಿಂದಿನ ಕೆಲ ಮಾಹಿತಿ ಆಯುಕ್ತರು ಆಕ್ಷೇಪ ಎತ್ತಿದ್ದಾರೆ.

‘ನಿಯಮಗಳ ಪ್ರಕಾರ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಬೇಕಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರಿಂದ ವರದಿಯನ್ನಾದರೂ ತರಿಸಿಕೊಳ್ಳಬೇಕಿತ್ತು. ರಾಜ್ಯಪಾಲರು ಆ ಕೆಲಸಗಳನ್ನು ಮಾಡಿಲ್ಲ. ಇದು ಮಾಹಿತಿ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ’ ಎಂದು ಹಿಂದಿನ ಮಾಹಿತಿ ಆಯುಕ್ತರೊಬ್ಬರು ಆರೋಪಿಸಿದರು.

‘ಅಮಾನತಿನಲ್ಲಿ ಇದ್ದಾಗಲೇ ಕರ್ತವ್ಯದ ಅವಧಿ ಮುಗಿದರೆ ಪಿಂಚಣಿ ಮತ್ತು ಇತರ ನಿವೃತ್ತಿ ಸವಲತ್ತುಗಳು ದೊರೆಯುವುದಿಲ್ಲ. ಹೀಗಾಗಿಯೇ ಅವರ ಅಮಾನತನ್ನು ಮೊದಲು ರದ್ದುಪಡಿಸಿ ಆನಂತರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಲಂಚ ಪ್ರಕರಣದ ಆರೋಪಿಗೆ ಪಿಂಚಣಿ ಮತ್ತು ಇತರ ಸವಲತ್ತುಗಳು ದೊರೆಯುವಂತೆ ಮಾಡಿದ್ದಾರೆ’ ಎಂಬುದು ಅವರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.