ADVERTISEMENT

ಸಿ.ಎಂಗೆ ತವರು ಪ್ರೀತಿ, ಸಂತ್ರಸ್ತರಿಗೆ ಮುಳುಗಡೆ ಭೀತಿ

ಕಲ್ಲೊಡ್ಡು ಯೋಜನೆಗೆ ಸಿಎಂ ಪಟ್ಟು: ಸಂತ್ರಸ್ತರಿಗೆ ಮತ್ತಷ್ಟು ಸಿಟ್ಟು

ಅನಿಲ್ ಸಾಗರ್
Published 31 ಆಗಸ್ಟ್ 2019, 20:43 IST
Last Updated 31 ಆಗಸ್ಟ್ 2019, 20:43 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಶಿವಮೊಗ್ಗ: ಶಿಕಾರಿಪುರಕ್ಕೆ ನೀರು ಹರಿಸುವ ಕಲ್ಲೊಡ್ಡು ಅಣೆಕಟ್ಟು ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಟ್ಟು ಹಿಡಿದಿದ್ದು, ಸಾಗರ ತಾಲ್ಲೂಕಿನ ಮುಳುಗಡೆ ಸಂತ್ರಸ್ತರಿಗೆ ಆತಂಕ ಎದುರಾಗಿದೆ.

ಈಗಾಗಲೇ ಸಾಗರ ತಾಲ್ಲೂಕಿನಲ್ಲಿ ಲಿಂಗನಮಕ್ಕಿ, ಮಡೆನೂರು, ಅಂಬ್ಲಿಗೊಳ ಜಲಾಶಯ ನಿರ್ಮಾಣದಿಂದ ಇಲ್ಲಿನವರು ಮುಳುಗಡೆ ಸಮಸ್ಯೆ ಎದುರಿಸಿದ್ದಾರೆ. ಇದೀಗ ಕಲ್ಲೊಡ್ಡು ಯೋಜನೆ ಜಾರಿ ಬಗ್ಗೆ ಮುಖ್ಯಮಂತ್ರಿ ಪುನರುಚ್ಚರಿಸಿರುವುದು ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 200ಕ್ಕೂ ಹೆಚ್ಚು ಕುಟುಂಬದವರು ಈಗಾಗಲೇ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಇತ್ತೀಚೆಗಷ್ಟೇ ಭೂಮಿಯ ಹಕ್ಕು ಸಿಕ್ಕಿದ್ದು, ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಯಾದರೆ 5 ಸಾವಿರ ಎಕರೆಗೂ ಹೆಚ್ಚು ಕೃಷಿ, ಅರಣ್ಯಭೂಮಿ ಮುಳುಗಡೆಯಾಗಿ ಕುಂದೂರು, ಕೊರಲಿಕೊಪ್ಪ, ಮಿಡಿನಾಗರ ಗ್ರಾಮಗಳ ಕುಟುಂಬಗಳು ಬೀದಿಗೆ ಬರುತ್ತವೆ.

ADVERTISEMENT

ನಿರಂತರ ಯತ್ನ: ಕಲ್ಲೊಡ್ಡು ಯೋಜನೆಗೆ 1980ರ ದಶಕದಲ್ಲೇ ಶಂಕುಸ್ಥಾಪನೆಯಾಗಿತ್ತು. ನಂತರ ಸಾಗರ ತಾಲ್ಲೂಕಿನ ಕೃಷಿಭೂಮಿ ಮುಳುಗಡೆಯಾಗುತ್ತದೆ ಎಂದು ಯೋಜನೆ ಕೈಬಿಡಲಾಗಿತ್ತು. 2006ರಲ್ಲಿ ಪುನಃ ಯೋಜನೆ ಮುನ್ನೆಲೆಗೆ ಬಂದಾಗಲೂ ಸ್ಥಳೀಯರ ವಿರೋಧದಿಂದಾಗಿ ನಿಲ್ಲಿಸಲಾಗಿತ್ತು. ತವರಿನ ಮೇಲಿನ ಪ್ರೀತಿಯಿಂದಾಗ ಯಡಿಯೂರಪ್ಪ ಈಗ ಮತ್ತೆ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ನೀರಿನ ಮೂಲವಿಲ್ಲ: ಈ ಪ್ರದೇಶದಲ್ಲಿ ಅಗತ್ಯ ನೀರಿನ ಮೂಲಗಳಿಲ್ಲ. ಮಳೆಯ ನೀರನ್ನೇ ಗುರಿಯಾಗಿಟ್ಟುಕೊಂಡು ರೂಪಿಸಲಾಗಿದೆ. ಇತ್ತೀಚಿನ ವರ್ಷಗಳಿಂದ ಈ ಭಾಗದಲ್ಲಿ ಮಳೆ ಕ್ಷೀಣಿಸಿ, ಕುಡಿಯುವ ನೀರಿಗೂ ಬರ ಉಂಟಾಗಿದೆ. ಪರಿಸ್ಥಿತಿ ಇದೊಂದು ಅವೈಜ್ಞಾನಿಕ ಯೋಜನೆಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆಯಿಂದಶಿಕಾರಿಪುರ ಹಾಗೂ ಸೊರಬ ತಾಲ್ಲೂಕಿನ ರಾಮಪುರ, ಕೋಟಿಪುರ, ಹೋತನಕಟ್ಟೆ, ಕಪ್ಪನಹಳ್ಳಿ, ಹೊನಕನಕೊಪ್ಪ, ಮಲ್ಲಾಪುರ, ಅಮಟೆಕೊಪ್ಪ, ಬನ್ನೂರು, ಜಕ್ಕನ ಹಳ್ಳಿ ಸೇರಿ ಹತ್ತಾರು ಗ್ರಾಮಗಳ ಕೃಷಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಹೀಗಾಗಿ ಈ ಯೋಜನೆ ಜಾರಿಗೊಳಿಸಬೇಕು ಎಂಬುದು ಶಿಕಾರಿಪುರ ಹಾಗೂ ಸೊರಬ ಕೃಷಿಕರ ಒತ್ತಾಯ.

**

ಈ ಯೋಜನೆಯಿಂದ ಕೆಲವರಿಗೆ ತೊಂದರೆಯಾದರೆ, ಹತ್ತಿಪ್ಪತ್ತು ಸಾವಿರ ಜನರಿಗೆ ಒಳ್ಳೆಯದಾಗುತ್ತದೆ. ಹೀಗಾಗಿ ಕೈಬಿಡುವ ಪ್ರಶ್ನೆಯೇ ಇಲ್ಲ. ಸಂತ್ರಸ್ತರಿಗೆ ಒಳ್ಳೆಯ ಪರಿಹಾರ ನೀಡಲಾಗುವುದು.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

**

ಕಲ್ಲೊಡ್ಡು ಯೋಜನೆಗೆ ನನ್ನ ವಿರೋಧವಿದೆ. ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಇನ್ನೊಮ್ಮೆ ನಿಯೋಗ ಹೋಗಿ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿ ಮನವೊಲಿಸುತ್ತೇವೆ.
- ಹರತಾಳು ಹಾಲಪ್ಪ, ಶಾಸಕ, ಸಾಗರ

**

ಈ ಯೋಜನೆ ಜಾರಿಗೊಳಿಸುವುದೂ ಒಂದೇ, ಸಾಗರದ ಜನರನ್ನು ಕೊಲ್ಲುವುದು ಒಂದೇ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬರಲಿವೆ. ಹೋರಾಟಕ್ಕೂ ಸಿದ್ಧರಿದ್ದೇವೆ.
- ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

**

ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಂದರೆ ವಿರೋಧಿಸುತ್ತೇವೆ. ಗುಂಡು ಹಾರಿಸಲು ಬಂದರೆ ಮೊದಲನೇಯವನಾಗಿ ನಾನೇ ಎದೆ ಮುಂದೊಡ್ಡುತ್ತೇನೆ.
- ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.