ADVERTISEMENT

ಸಂಪುಟ ವಿಸ್ತರಣೆ: ಶಾ ಭೇಟಿಗೆ ಇಂದು ರಾತ್ರಿ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 19:30 IST
Last Updated 13 ಜನವರಿ 2020, 19:30 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ತಡ ಆಗುವುದಿಲ್ಲ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ಮಾತುಕತೆ ನಡೆಸಲು ಇಂದು ರಾತ್ರಿಯೇ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸ ಮತ್ತು ದೇವದುರ್ಗದಲ್ಲಿ ಸೋಮವಾರ ಈ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ.

ಮಂತ್ರಿ ಮಂಡಲ ವಿಸ್ತರಣೆ ಕುರಿತು ಊಹಾಪೋಹಗಳು ಪ್ರಕಟ ಆಗುತ್ತಿವೆ. ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದಿರುವವರಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ನೂರಕ್ಕೆ ನೂರರಷ್ಟು ಸಂಪುಟ ವಿಸ್ತರಣೆ ಆಗುತ್ತದೆ. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಅವರು ಹೇಳಿದರು.

ADVERTISEMENT

ಸೋಮವಾರ ತಮ್ಮನ್ನು ಭೇಟಿಯಾಗುವಂತೆ ಅಮಿತ್‌ ಶಾ ಸಮಯ ನೀಡಿದ್ದರು. ಆದರೆ, ದೇವದುರ್ಗದ ಹಾಲುಮತದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ನಾನೇ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ನಾಳೆ (ಮಂಗಳವಾರ) ಭೇಟಿ ಮಾಡುತ್ತೇನೆ. ಒಂದು ವೇಳೆ ನಾಳೆ ಅವರಿಗೆ ಸಮಯ ಇಲ್ಲವಾದರೆ ಇದೇ 18 ಕ್ಕೆ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಅಮಿತ್‌ ಶಾ ಭೇಟಿ ಕಾರ್ಯಕ್ರಮವಿದೆ. ಆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತೇನೆ. ದಾವೋಸ್‌ ಹೋಗುವುದಕ್ಕೂ ಸಚಿವ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ ಎಂದರು.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಿಣಿಯಲ್ಲಿ ಮಾತನಾಡಿ, ಇನ್ನು ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ವರಿಷ್ಠರ ತೀರ್ಮಾನದ ಪ್ರಕಾರವೇ ಸಚಿವ ಸ್ಥಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.