ADVERTISEMENT

ಬಿಎಸ್‌ವೈ ಅವರಿಂದ ಸತ್ಯ ಹೊರಬಂದಿದೆ; ಸಿದ್ದರಾಮಯ್ಯ

ಸವದಿ, ಕಟೀಲ್‌ ವಿಡಿಯೊ ಬಿಡುಗಡೆ ಮಾಡಿರಬಹುದು;

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 13:57 IST
Last Updated 4 ನವೆಂಬರ್ 2019, 13:57 IST
   

ಬೆಳಗಾವಿ: ‘ಅನರ್ಹ ಶಾಸಕರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೇ ಮುಂಬೈನಲ್ಲಿ ಇರಿಸಿದ್ದರು ಎನ್ನುವ ಸತ್ಯ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದಲೇ ಹೊರಬಂದಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಬಿಎಸ್‌ವೈ ಸತ್ಯವನ್ನೇ ಹೇಳಿದ್ದಾರೆ. ಅನರ್ಹ ಶಾಸಕರನ್ನು ಹೋಟೆಲ್‌ನಲ್ಲಿ ಇರಿಸಿದ್ದೂ ಅಲ್ಲದೇ, ಭದ್ರತೆಯನ್ನೂ ಅಮಿತ್‌ ಶಾ ಅವರೇ ಒದಗಿಸಿದ್ದರು’ ಎಂದರು.

‘ವಿಡಿಯೊದಲ್ಲಿ ಮಾತನಾಡಿದ್ದು ತಾವೇ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೊದಲು ಒಪ್ಪಿಕೊಂಡಿದ್ದರು. ಆ ನಂತರ, ದೆಹಲಿಯ ನಾಯಕರು ಬೈದ ಮೇಲೆ ಉಲ್ಟಾ ಹೊಡೆದಿದ್ದಾರೆ. ಪಾಪ, ಅವರೀಗ ಸಿಕ್ಕಿಹಾಕಿಕೊಂಡಿದ್ದಾರೆ’ ಎಂದು ಛೇಡಿಸಿದರು.

ADVERTISEMENT

‘ಈ ವಿಡಿಯೊವನ್ನು ಡಿಸಿಎಂ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರಬಹುದು. ಕಾಂಗ್ರೆಸ್‌ ಅಲ್ಲ, ಬಿಜೆಪಿ ದಿವಾಳಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶ್ರೀಮಂತ ಪಾಟೀಲ ಹೃದಯಾಘಾತವೆಂದುಕೊಂಡು ಚೆನ್ನೈಗೆ ಹೋಗಿದ್ದರು. ಹೃದಯಾಘಾತವಾದ ವ್ಯಕ್ತಿ ಯಾರಾದರೂ 200 ಕಿ.ಮೀ ಕಾರಿನಲ್ಲಿ ಪ್ರಯಾಣಿಸುತ್ತಾರೆಯೇ? ಆ ಮೇಲೆ ಅವರು ಮುಂಬೈಗೆ ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ಆಶ್ಚರ್ಯವೆಂದರೆ, ಆ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರೇ ಇರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಾನು ನೇರ ರಾಜಕಾರಣ ಮಾಡಿದವನು. 40 ವರ್ಷಗಳ ನನ್ನ ರಾಜಕೀಯದಲ್ಲಿ ಯಾವತ್ತೂ ಹಿಂದೊಂದು, ಮುಂದೊಂದು ಮಾಡಿ ಗೊತ್ತಿಲ್ಲ. ಡರ್ಟಿ ಪಾಲಿಟಿಕ್ಸ್‌ ನಾನ್ಯಾವತ್ತೂ ಮಾಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರೇ ಡರ್ಟಿ ಪಾಲಿಟಿಕ್ಸ್‌ ಮಾಡುತ್ತಾರೆ’ ಎಂದು ಕಿಡಿಕಾರಿದರು.

ಬಿಎಸ್‌ವೈ ಮುಗಿಸಲು ಯತ್ನ:‘ಅನರ್ಹರಿಗೆ ಟಿಕೆಟ್‌ ನೀಡಬಾರದೆನ್ನುವ ಲಾಬಿ ಬಿಜೆಪಿಯಲ್ಲಿ ನಡೆದಿದೆ. ಮತ್ತೊಂದೆಡೆ, ಬಿಎಸ್‌ವೈ ವಿರುದ್ಧ ಮತ್ತೊಂದು ಲಾಬಿ ಇದೆ. ಬಿಎಸ್‌ವೈ ಅವರನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

‘ರಮೇಶ ಜಾರಕಿಹೊಳಿ ತಪ್ಪು ನಿರ್ಣಯ ಕೈಗೊಂಡರು. ನಮ್ಮಲ್ಲಿದ್ದಾಗ ಸಚಿವರಾಗಿದ್ದರು. ಸ್ಥಳೀಯ ಮಟ್ಟದಿಂದ ರಾಷ್ಟ್ರ ಮಟ್ಟದ ನಾಯಕರೆಲ್ಲರೂ ಅವರಿಗೆ ಗೌರವ ನೀಡುತ್ತಿದ್ದರು. ಆದರೆ, ಈಗ ಅವರು ಬೇರೊಬ್ಬರ ಮನೆ ಬಾಗಿಲು ನಿಂತುಕೊಂಡು ಟಿಕೆಟ್‌ಗಾಗಿ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.