ADVERTISEMENT

ಬಜೆಟ್‌: ಇಲಾಖಾವಾರು ಚರ್ಚೆ ಆರಂಭಿಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 16:09 IST
Last Updated 21 ಜನವರಿ 2023, 16:09 IST
   

ಬೆಂಗಳೂರು: ಮುಂಬರುವ ಆರ್ಥಿಕ ವರ್ಷದ ಬಜೆಟ್‌ ಅಂತಿಮಗೊಳಿಸುವುದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಇಲಾಖಾವಾರು ಚರ್ಚೆ ನಡೆಸಿದರು. ಮೊದಲ ದಿನ ಹಲವು ಇಲಾಖೆಗಳ ಸಚಿವರು ಅಧಿಕಾರಿಗಳ ಜತೆ ಅವರು ಸಮಾಲೋಚನೆ ನಡೆಸಿದರು.

ಮೊದಲ ದಿನ ಹತ್ತು ಇಲಾಖೆಗಳ ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಮಯ ನಿಗದಿಪಡಿಸಿದ್ದರು. ಆದರೆ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರವಾಸ ಮುಗಿಸಿ ಅವರು ಹಿಂದಿರುಗುವುದು ವಿಳಂಬವಾಯಿತು. ಸುಮಾರು ಒಂದು ಗಂಟೆಯಷ್ಟು ತಡವಾಗಿ ಸಭೆ ಆರಂಭವಾಯಿತು. ಆರು ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾತ್ರ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಆರು ಇಲಾಖೆಗಳ ಬೇಡಿಕೆಗಳ ಪಟ್ಟಿಯನ್ನು ಸಚಿವರು, ಅಧಿಕಾರಿಗಳು ಸಲ್ಲಿಸಿದರು. ಕೆಲವು ಇಲಾಖೆಗಳಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಸಭೆಯಲ್ಲಿದ್ದರು. ಉಳಿದ ಇಲಾಖೆಗಳ ಬೇಡಿಕೆಯನ್ನು ಅಧಿಕಾರಿಗಳೇ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.