ADVERTISEMENT

ಬಜೆಟ್‌: ಹಣಕಾಸು ಇಲಾಖೆ ಅಧಿಕಾರಿಗಳು ಸಿ.ಎಂಗೇ ಟೋಪಿ ಹಾಕಿದ್ದಾರೆ –ವಿಶ್ವನಾಥ್‌

ಸರ್ಕಾರಕ್ಕೇ ಚಾಟಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 12:19 IST
Last Updated 10 ಮಾರ್ಚ್ 2021, 12:19 IST
ವಿಶ್ವನಾಥ್
ವಿಶ್ವನಾಥ್   

ಬೆಂಗಳೂರು: ‘ಈ ಬಜೆಟ್‌ನಲ್ಲಿ ಏನೂ ಇಲ್ಲ. ಕಳೆದ 10 ವರ್ಷಗಳ ಬಜೆಟ್ ನೋಡಿದ್ದೇನೆ. ಅದೇ ಅಂಕಿ ಅಂಶ ತಿರುಗು ಮುರುಗು ಮಾಡಿದ್ದಾರೆ. ಅದೇ ಯೋಜನೆ, ಅದೇ ಅನುದಾನ. ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೇ ಟೋಪಿ ಹಾಕಿದ್ದಾರೆ’ ಎಂದು ಬಿಜೆಪಿಯ ಎಚ್‌. ವಿಶ್ವನಾಥ್‌, ಆಡಳಿತ ಪಕ್ಷಕ್ಕೇ ಚಾಟಿ ಬೀಸಿದರು.

ವಿಧಾನ ಪರಿಷತ್‌ನಲ್ಲಿ ವಿತ್ತೀಯ ಕಲಾಪದ ವೇಳೆ ಮಾತನಾಡಿದ ಅವರು, ‘ಹಣಕಾಸು ಖಾತೆ ನಿಭಾಯಿಸಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಹಲವು ಬಾರಿ ಬಜೆಟ್ ಮಂಡಿಸಿದ್ದಾರೆ. ಹಾಗಂತ, ಅವರು ಆರ್ಥಿಕ ತಜ್ಞರಲ್ಲ. ಆರ್ಥಿಕ ಖಾತೆಗೆಂದೇ ಪ್ರತ್ಯೇಕ ಸಚಿವರು ಬೇಕು’ ಎಂದು ಪ್ರತಿಪಾದಿಸಿದರು.

‘33 ಇಲಾಖೆಗಳಲ್ಲಿ ಅತಿ ಮುಖ್ಯವಾದ ಹಣಕಾಸು, ಡಿಪಿಎಆರ್‌, ಕಾನೂನು ಈ ಮೂರು ಅತಿ ಮುಖ್ಯವಾದುದು. ಆಡಳಿತಾತ್ಮಕ ವ್ಯವಸ್ಥೆ, ತೀರ್ಮಾನಗಳನ್ನು ತೆಗೆದುಕೊಳ್ಳುವ ಇಲಾಖೆಗಳು. ಈ ಪೈಕಿ, ಮೊದಲ ಎರಡು ಮುಖ್ಯಮಂತ್ರಿ ಬಳಿ ಇದೆ’ ಎಂದರು.

ADVERTISEMENT

‘1978ರಲ್ಲಿ ನಾನು ಸದನದೊಳಗೆ ಬಂದೆ. ವೀರಪ್ಪ ಮೊಯಿಲಿ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಆಗ ಬಜೆಟ್‌ಗೆ ಸಾಕಷ್ಟು ಮಹತ್ವವಿತ್ತು. ಬಜೆಟ್ ಮಂಡಿಸಿದ ಮೇಲೆ ಅದರ ಮೇಲೆ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಹಿಂದಿನ ಬಜೆಟ್ ಗಾತ್ರ ಎಷ್ಟು, ಎಷ್ಟು ಖರ್ಚು ಆಗಿದೆ. ಇಲಾಖಾವಾರು ಚರ್ಚೆಯ ಬಳಿಕ ಸಂಬಂಧಪಟ್ಟ ಸಚಿವರು ಉತ್ತರ ಕೊಡುತ್ತಿದ್ದರು. ಆದರೆ ಈಗ ಏನಾಗಿದೆ’ ಎಂದು ಪ್ರಶ್ನಿಸಿದರು.

‘ಈ ಹಿಂದೆ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿದ್ದರು. ಈಗ ಮುಖ್ಯಮಂತ್ರಿಯೇ ಅದನ್ನು ನಿಭಾಯಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಅವಧಿಯಲ್ಲಿ ಹಣಕಾಸು ಖಾತೆಯನ್ನು ಬೇರೆಯವರಿಗೆ ಕೊಡಿ ಎಂದು ಕುಮಾರಸ್ವಾಮಿಗೆ ನಾನು ಹೇಳಿದೆ. ಅದಕ್ಕೆ ಅವರು ನನಗೇನು ಸಾಮರ್ಥ್ಯ ಇಲ್ವಾ, ನಾನು ನಿಭಾಯಿಸಲ್ವಾ ಎಂದು ಕೇಳಿದ್ರು. ನಿಮಗೆ ಸಾಮರ್ಥ್ಯವಿದೆ. ಆದರೆ, ನಿಮಗೆ ಸಮಯವಿಲ್ಲ. ಮುಖ್ಯಮಂತ್ರಿಯೇ ಆ ಖಾತೆ ನಿಭಾಯಿಸಿದರೆ, ಅದು ಸತ್ತು ಹೋಗುತ್ತದೆ. ಹೀಗಾಗಿ ಬೇರೆಯವರಿಗೆ ಕೊಡಿ ಎಂದೆ. ಇದರಿಂದ ನನಗೂ ಕುಮಾರಸ್ವಾಮಿಗೆ ಭಿನ್ನಾಭಿಪ್ರಾಯ ಮೂಡಿತು’ ಎಂದರು.

‘ಮುಖ್ಯಮಂತ್ರಿ ಹಣಕಾಸು ಇಲಾಖೆಯೂ ಸೇರಿದಂತೆ ಪ್ರಮುಖ ಖಾತೆಗಳನ್ನು ಇಟ್ಟುಕೊಳ್ಳಬಾರದು. ಆದರೆ, ಅವರೇ ಪ್ರಮುಖ ಖಾತೆಗಳನ್ನು ಇಟ್ಟುಕೊಳ್ಳುತ್ತಾರೆ. ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಹಣಕಾಸು ಖಾತೆ ಹೊಂದಿರಲಿಲ್ಲ, ಆದರೆ, ನಮ್ಮ ಮುಖ್ಯಮಂತ್ರಿ ಹಣಕಾಸು ಖಾತೆ ಇಟ್ಟುಕೊಂಡಿದ್ದಾರೆ. ಅದರ ಜೊತೆಗೆ ಹಲವು ಖಾತೆಗಳನ್ನೂ ಇಟ್ಟುಕೊಂಡಿದ್ದಾರೆ. ಏಕೆ ಇಷ್ಟೊಂದು ಖಾತೆ ಇಟ್ಟುಕೊಂಡಿದ್ದಾರೊ ಗೊತ್ತಿಲ್ಲ’ ಎಂದರು.

‘ವಿವಿಧ ಮಂಡಳಿ, ನಿಗಮಗಳಿಂದ ಆಂತರಿಕ ಸೃಜನೆಯ ಮೂಲಕ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕಳೆದ ಬಜೆಟ್‌ನಲ್ಲೂ ಈ ಪ್ರಸ್ತಾಪವಿದೆ. ಎಷ್ಟು ಸೃಜನೆಯಾಗಿದೆ ಎಂದು ಅಧಿಕಾರಿಗಳೇ ಹೇಳಬೇಕು. ಬಹುತೇಕ ನಿಗಮಗಳು ಸರ್ಕಾರದ ಅನುದಾನದಲ್ಲಿ ನಡೆಯುತ್ತಿವೆ. ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ನಿಗಮ, ಮಂಡಳಿಗಳು ವೆಚ್ಚಕ್ಕೆ ದಾರಿಯಾಗಿದ್ದರೂ ಅಧಿಕಾರಿಗಳು ನೀಟಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದರು.

‘ಎಲ್ಲ ಇಲಾಖೆಯಲ್ಲೂ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹೊರಗುತ್ತಿಗೆ ನೌಕರರನ್ನು ಒದಗಿಸುವ ಗುತ್ತಿಗೆದಾರರು ನಿವೃತ್ತ ಅಧಿಕಾರಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು’ ಎಂದರು.

‘ವಿಧಾನಸೌಧ ಸದಾ ಸುಂದರಿ. ಈ ಸುಂದರಿಗೆ ಎಲ್ಲರೂ ಮಾರು ಹೋಗಿದ್ದಾರೆ. ಒಂದಲ್ಲ ಒಂದು ದಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಮನೆ, ಮಠ ಮಾಡಿಕೊಂಡು ಬರುತ್ತಾರೆ. ಆದರೆ, ಸಾಧ್ಯವಾಗದೆ ಅವರು ಪಿಶಾಚಿಗಳಾಗಿ ಇದರ ಸುತ್ತ ಸುತ್ತುತ್ತಿದ್ದಾರೆ. ನನ್ನ ‘ಹಳ್ಳಿ ಹಕ್ಕಿ’ ಪುಸ್ತಕದಲ್ಲೆ ಇದನ್ನು ಬರೆದಿದ್ದೇನೆ’ ಎಂದರು. ಬಿಜೆಪಿಯ ಭಾರತೀ ಶೆಟ್ಟಿ ಮಧ್ಯಪ್ರವೇಶಿಸಿದಾಗ, ‘ನಿನಗಿಂತ ಸುಂದರಿ ಯಾರು ಇಲ್ಲ ಬಿಡಮ್ಮ’ ಎಂದು ವಿಶ್ವನಾಥ್ ಹಾಸ್ಯ ಚಟಾಕಿ ಹಾರಿಸಿದರು.

‘ವಿಧಾನಸೌಧ ಇಂದು ಮಾಲ್ ಆಗಿದೆ. ಏನು ಬೇಕಾದರೂ ಮಾರಾಟ ಮಾಡಬಹುದು, ಖರೀದಿ ಮಾಡಬಹುದು. ವರ್ಗಾವಣೆ, ಟೆಂಡರ್ ಕೊಡಿಸುವ ದಲ್ಲಾಳಿಗಳೇ ಹೆಚ್ಚಾಗಿದ್ದಾರೆ’ ಎಂದೂ ವಿಶ್ವನಾಥ್‌ ಹೇಳಿದರು.

‘ಇಂದು ಮೀಸಲಾತಿ ಹೋರಾಟ ಹೆಚ್ಚಾಗುತ್ತಿದೆ. ಕುರುಬ, ವಾಲ್ಮೀಕಿ, ಪಂಚಮಸಾಲಿ, ಎಲ್ಲರಿಗೂ ಮೀಸಲಾತಿ ಕೊಡಿ. ಆದರೆ ಕೆನೆಪದರ ಜಾರಿಗೆ ತನ್ನಿ. ವಿಶ್ವನಾಥನಿಗೂ ಮೀಸಲಾತಿ, ಮಗನಿಗೂ ಮೀಸಲಾತಿ. ಖರ್ಗೆ, ಗೋವಿಂದ ಕಾರಜೋಳ ಅವರಿಗೂ ಮೀಸಲಾತಿ, ಅವರ ಮಕ್ಕಳಿಗೂ ಮೀಸಲಾತಿ ಕೊಟ್ಟರೆ ಏನು ಪ್ರಯೋಜನ. ಕೆನೆಪದರು ತಂದು ಮೀಸಲಾತಿ ಕೊಡಿ. ಆಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ತಲುಪಲು ಸಾಧ್ಯ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.