ADVERTISEMENT

ಬಫರ್‌ ಝೋನ್‌ ಕಡಿತ: ಮಸೂದೆ ವಾಪಸ್‌; ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 19:30 IST
Last Updated 15 ಸೆಪ್ಟೆಂಬರ್ 2025, 19:30 IST
<div class="paragraphs"><p>ಥಾವರಚಂದ್‌ ಗೆಹಲೋತ್‌</p></div>

ಥಾವರಚಂದ್‌ ಗೆಹಲೋತ್‌

   

ಬೆಂಗಳೂರು: ಕೆರೆಗಳ ಸಂರಕ್ಷಿತ ಪ್ರದೇಶವನ್ನು (ಬಫರ್‌ ಝೋನ್‌) ಕಡಿಮೆ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ’ಯನ್ನು ಸ್ಪಷ್ಟೀಕರಣ ಕೇಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

ಕೆರೆಗಳು ಮತ್ತು ರಾಜಕಾಲುವೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ ವನ್ನು ನಿಗದಿಪಡಿಸಲು ಹಾಗೂ ಬಫರ್‌ಝೋನ್‌ನಲ್ಲಿ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಮಸೂದೆ ತಿದ್ದುಪಡಿಗೆ ಸರ್ಕಾರ ಮುಂದಾಗಿತ್ತು.

ADVERTISEMENT

ಆದರೆ, ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಿಕರ ಸಂಘವಾದ ‘ಬೆಂಗಳೂರು ಟೌನ್ ಹಾಲ್‌’, ರಾಜ್ಯಪಾಲರಿಗೆ ಪತ್ರ ಬರೆದು ಮಸೂದೆಗೆ ಅಂಕಿತ ಹಾಕದಂತೆ ಮನವಿ ಮಾಡಿತ್ತು.

‘ಕೆರೆಗಳ ಬಫರ್ ಝೋನ್‌ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ. ಪರಿಸರ ಸಮತೋಲನ ಕಾಪಾಡಲು 30 ಮೀಟರ್‌ ಬದಲು 300 ಮೀಟರ್‌ಗೆ ಬಫರ್ ಝೋನ್‌ ಹೆಚ್ಚಿಸುವ ಅಗತ್ಯವಿದೆ’ ಎಂದು ಸಂಘವು ಪತ್ರದಲ್ಲಿ ಪ್ರತಿಪಾದಿಸಿತ್ತು.

‘ಬೆಂಗಳೂರು ಟೌನ್ ಹಾಲ್‌’ ಸಂಘದ ಪತ್ರದಲ್ಲಿದ್ದ ಅಂಶಗಳನ್ನು ಉಲ್ಲೇಖಿಸಿ ಸ್ಪಷ್ಟೀಕರಣ ಕೇಳಿರುವ ರಾಜ್ಯಪಾಲರು, ಆ ಅಂಶಗಳಿಗೆ ವಿವರವಾದ ಸ್ಪಷ್ಟನೆಗಳ ಸಹಿತ ಕಡತವನ್ನು ಮತ್ತೊಮ್ಮೆ ಕಳುಹಿಸುವಂತೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.