ADVERTISEMENT

ಉಪಚುನಾವಣೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪೂರ್ವ ಪರೀಕ್ಷೆ: ಎಚ್‌.ಡಿ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 6:16 IST
Last Updated 30 ಅಕ್ಟೋಬರ್ 2018, 6:16 IST
   

ಬಳ್ಳಾರಿ:ರಾಜ್ಯದ ಐದು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯು ದೇಶದ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜಾತ್ಯತೀತ ಪಕ್ಷಗಳು ಎದುರಿಸಲಿರುವ ಪರೀಕ್ಷೆಯಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರತಿಪಾದಿಸಿದರು.

ದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆಗೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಇಲ್ಲಿಯೂ ಈ ಮೈತ್ರಿಯ ಭಾಗವಾಗಿರುವ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡುತ್ತಿದ್ದಾರೆ ಎಂದು ನಗರದಲ್ಲಿ‌ ಮಂಗಳವಾರ ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು.

ಆಂಧ್ರದ ‌ಚಂದ್ರಬಾಬು ನಾಯ್ಡು ಅವರು ಮಹಾಮೈತ್ರಿ ರಚನೆಯ ಪ್ರಯತ್ನ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಇಲ್ಲದೆ ಯಾವ ಒಕ್ಕೂಟವೂ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯ ಎಂದು ಪ್ರತಿಪಾದಿಸಿದರು.

ADVERTISEMENT

ರಾಹುಲ್ ಗಾಂಧಿಎಐಸಿಸಿ‌ ಅಧ್ಯಕ್ಷರಾಗಿ ಅನುಭವ ಗಳಿಸಿಕೊಳ್ಳುತ್ತಿದ್ದಾರೆ. ಅವರನ್ನು ಬಿಟ್ಟು ಪ್ರಧಾನಿ ಅರ್ಹತೆಯುಳ್ಳವರ ‌ಕುರಿತ ‌‌ಚರ್ಚೆ ಅಪೂರ್ಣ. ರಾಹುಲ್ ಗಾಂಧಿಯವರಿಗೆ ನನ್ನ ಬೆಂಬಲವಿದೆ ಎಂದು‌ ಪ್ರಶ್ನೆಯೊಂದಕ್ಕೆ‌ ಉತ್ತರಿಸಿದರು.

ದೇಶದಲ್ಲಿ‌ ಮಹಾಮೈತ್ರಿಯು ಚುನಾವಣೆಗಳಿಗೆ‌ ಮುನ್ನ ಮತ್ತು ನಂತರ, ಎರಡು ಹಂತಗಳಲ್ಲಿ ಏರ್ಪಡಲಿದೆ. ಬಿಎಸ್‌ಪಿಯಮಾಯಾವತಿ ಈಗ ಜೆಡಿಎಸ್ ಜೊತೆಗೆ ಮಾತ್ರ ಇರಬಹುದು. ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆಗೂ ಬರುವ‌ ಸಾಧ್ಯತೆ ಇದೆ ಎಂದರು.

ಉತ್ತರಪ್ರದೇಶದಲ್ಲೂ ಕಾಂಗ್ರೆಸ್‌ ಕೂಡ ಬಿಎಸ್‌ಪಿ ಮತ್ತು‌ ಜೆಡಿಎಸ್ ಜೊತೆಗೆ ಬರುವ ‌ಸನ್ನಿವೇಶಗಳು ನಿರ್ಮಾಣವಾಗಬಹುದು. ಅದಕ್ಕೆ‌ ಅಗತ್ಯವಿರುವುದಾದರೆ ನಾನು ಮಧ್ಯಪ್ರವೇಶ ಮಾಡಲು‌ ಸಿದ್ಧ ಎಂದರು.

ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಮೈತ್ರಿ‌ ಸರ್ಕಾರದ ಶಕ್ತಿ ಪ್ರದರ್ಶನವಲ್ಲ. ಜಾತ್ಯತೀತ ಪಕ್ಷಗಳ ಒಗ್ಗಟ್ಟಿನ ಪ್ರದರ್ಶನ ಎಂದು ಹೇಳಿದರು.

ಹಿಂದೆ ನಡೆದಿದ್ದ‌ 13 ಕಡೆ ನಡೆದಿದ್ದ ಉಪ‌ಚುನಾವಣೆಗಳ ಪೈಕಿ ಕೇವಲ ಒಂದು ಕಡೆ ಮಾತ್ರ ಬಿಜೆಪಿ ಗೆದ್ದಿದೆ. ಉಳಿದ 12 ಕಡೆ ಜಾತ್ಯತೀತ ಪಕ್ಷಗಳ ಒಕ್ಕೂಟವೇ ಗೆದ್ದಿದೆ‌. ರಾಜ್ಯದಲ್ಲೂ ಇದೇ ಬಗೆಯ ಫಲಿತಾಂಶ ‌ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ‌ನಡೆದಿದ್ದ‌‌ ವಿಧಾನಸಭೆ‌ ಚುನಾವಣೆಯಲ್ಲಿ ಜೆಡಿಎಸ್‌ಗೆ 85 ಸಾವಿರ ಮತಗಳು ದೊರಕಿದ್ದವು. ಅದಕ್ಕಿಂತಲೂ ಹೆಚ್ಚು‌ ಮತಗಳನ್ನು ಪಕ್ಷದ ಮುಖಂಡರು‌ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ದೇವೇಗೌಡರಿಗೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ‌ ಪ್ರೀತಿ ಹೆಚ್ಚಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ವ್ಯಕ್ತಿಗತ ಪ್ರಶ್ನೆಗೆ ಅವಕಾಶವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.