ADVERTISEMENT

ನಾನು ಸಂಘದ ‘ಸ್ವಯಂಸೇವಕ’: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿ.ಟಿ. ರವಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:47 IST
Last Updated 22 ನವೆಂಬರ್ 2020, 20:47 IST
 ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ‘ನಾನು ಆರ್‌ಎಸ್‌ಎಸ್‌ ಸಂಸ್ಥಾಪಕ ಅಲ್ಲ. ನಾನೊಬ್ಬ ಸಂಘದ ಸ್ವಯಂಸೇವಕ. ಪರಮ ಪೂಜ್ಯ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಗುರುವಾಗಿ ಸ್ವೀಕರಿಸಿದ್ದು ಸಹಸ್ರಾರು ವರ್ಷಗಳಿಂದ ಪ್ರೇರಣೆ ನೀಡಿದ ಭಗವದ್ ಧ್ವಜವನ್ನು ಮತ್ತು ‘ವ್ಯಕ್ತಿಗಿಂತ ತತ್ವ ಶ್ರೇಷ್ಠ’ ಎಂಬ ಸಿದ್ದಾಂತವನ್ನು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್‌ ಮಾಡಿದ್ದಾರೆ.

‘ರವಿ ಆರ್‌ಎಸ್‌ಎಸ್‌ ಸ್ಥಾಪಕನಾ? ಹೆಡಗೇವಾರ್ ಸಹಚರನಾ?’ ಎಂದು ಪ್ರಶ್ನಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಅವರು, ‘ಸಂಘ ಸ್ವಯಂಸೇವಕರಿಗೆ ಹೇಳಿಕೊಟ್ಟಿದ್ದು ದೇಶ ಮೊದಲು ಎನ್ನುವ ತತ್ವವನ್ನು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಭಾವವನ್ನು. ಇದು ಅರ್ಥವಾಗಬೇಕಾದರೆ, ಅಸ್ಪೃಶ್ಯತೆಯ, ಜಾತೀಯತೆಯ ಸೋಂಕಿಲ್ಲದೆ ನಾವೆಲ್ಲರೂ ಒಂದು, ಭಾರತಮಾತೆಯ ಮಕ್ಕಳು ಎಂದು ಬದುಕಬೇಕಾದರೆ ನೀವು ಶಾಖೆಗೆ ಬರಬೇಕು’ ಎಂದಿದ್ದಾರೆ.

‘ನಾನು ನಿಮ್ಮ ಹಾಗೆ, ನೀವು ಕಾಂಗ್ರೆಸ್ ಸಂಸ್ಥಾಪಕ ಎ.ಒ. ಹ್ಯೂಮ್ ರ ಮೊಮ್ಮಗನೋ, ಮರಿಮಗನೋ ಎಂದು ಕೇಳುವುದಿಲ್ಲ. ಇಂದಿರಾ ಗಾಂಧಿಯವರ ದತ್ತುಪುತ್ರ ಎಂದೂ ಹೇಳುವುದಿಲ್ಲ. ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿದರು ಎಂದು ಆರೋಪಿಸುವುದಿಲ್ಲ. ಬದಲಾಗಿ ವಂಶವಾದಕ್ಕಿಂತ, ಜಾತಿವಾದಕ್ಕಿಂತ, ರಾಷ್ಟ್ರವಾದ ದೇಶಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಯಸುತ್ತೇನೆ’ ಎಂದು ಕುಟುಕಿದ್ದಾರೆ.

ADVERTISEMENT

‘ನೀವಿರುವ ಪಕ್ಷದಲ್ಲಿ ದೇಶಕ್ಕಿಂತ ಮತ ಬ್ಯಾಂಕ್ ಮುಖ್ಯವಾಗಿದೆ. ಪ್ರಜಾಪ್ರಭುತ್ವಕ್ಕಿಂತ ರಾಜಪ್ರಭುತ್ವದ ಮಾದರಿಯ ಕುಟುಂಬ ರಾಜಕಾರಣವಿದೆ. ದಾರಿ ತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ’ ಎಂದೂ ‍ಪ್ರಶ್ನಿಸಿದ್ದಾರೆ.

‘ಮಹಾತ್ಮ ಗಾಂಧಿಯವರು ಬದುಕಿಲ್ಲ. ಕಾಂಗ್ರೆಸ್ ಅವರ ತತ್ವಕ್ಕೆ ನೆಹರು ಅವರ ಕಾಲದಲ್ಲಿಯೇ ಎಳ್ಳುನೀರು ಬಿಟ್ಟಾಗಿದೆ. ದೇಶಭಕ್ತಿ ಸರಳವಾಗಿ ಅರ್ಥವಾಗಲು ಸಂಘದ ಶಾಖೆಗಿಂತ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ರೂಪದ ಸಂಪರ್ಕ ಮಾಡಿದ್ದೇನೆ. ಇನ್ನೆಷ್ಟು ದಿನ ನಯವಂಚಕ, ಸ್ವಾರ್ಥದ ರಾಜಕಾರಣ? ನಿಮಗೆ ಬಿಟ್ಟಿದ್ದು’ ಎಂದು ಕೆಣಕಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.