ಬೆಂಗಳೂರು: ಹೊಸದಾಗಿ ರಚನೆಯಾದ 21 ತಾಲ್ಲೂಕುಗಳಿಗೆ ತಲಾ ₹8.60 ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡಗಳನ್ನು ನಿರ್ಮಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹೊಸ ತಾಲ್ಲೂಕುಗಳಾದ ಚೇಳೂರು, ಮಂಚೇನಹಳ್ಳಿ, ನ್ಯಾಮತಿ, ಹನೂರು, ಅಜ್ಜಂಪುರ, ಉಳ್ಳಾಲ, ಸಾಲಿಗ್ರಾಮ, ಅರಕೇರಾ, ಮೂಡಲಗಿ,ಯರಗಟ್ಟಿ, ನಿಪ್ಪಾಣಿ, ಗುಳೇದಗುಡ್ಡ, ರಬಕವಿ–ಬನಹಟ್ಟಿ, ತೇರದಾಳ, ನಿಡಗುಂದಿ, ದೇವರ ಹಿಪ್ಪರಗಿ, ಚಡಚಣ, ಆಲಮೇಲ,ಅಣ್ಣಿಗೇರಿ, ಹುಬ್ಬಳ್ಳಿ ನಗರ, ಲಕ್ಷ್ಮೇಶ್ವರಗಳಲ್ಲಿ ‘ಎ’ ದರ್ಜೆಯ ಸುಸಜ್ಜಿತ ತಾಲ್ಲೂಕು ಪ್ರಜಾಸೌಧ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರಮುಖ ತೀರ್ಮಾನಗಳು
ಕೋಲಾರ ಜಿಲ್ಲೆ ಮಾಲೂರು ಹಾಗೂ ಮಂಡ್ಯ ಜಿಲ್ಲೆ ಮದ್ದೂರು ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ
ಗದಗ–ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಅಧಿನಿಯಮ ಶುಕ್ರವಾರದಿಂದ ಜಾರಿ
ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಮಸೂದೆ 2025 ಅನ್ನು ಸುಗ್ರಿವಾಜ್ಞೆ ಹೊರಡಿಸಲಾಗುವುದು.
‘ಬಾನು, ದೀಪಾಗೆ ಸಂಪುಟ ಅಭಿನಂದನೆ‘
ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ರಾಜ್ಯ ಸಚಿವ ಸಂಪುಟ ಅಭಿನಂದನೆ ಸಲ್ಲಿಸಿದೆ.
‘ಬಾನು ಮುಷ್ತಾಕ್ ಅವರು ಸಮ್ಮತಿಸಿದರೆ ಬೆಂಗಳೂರಿನಲ್ಲಿ ಬಿಡಿಎಯಿಂದ ಜಿ ಕೆಟಗರಿ ನಿವೇಶನ ನೀಡಲು ಸಂಪುಟ ತೀರ್ಮಾನಿಸಿತು’ ಎಂದು ಸಭೆಯ ಬಳಿಕ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಎಂಡಿಎ ಕಾಯ್ದೆ ಇಂದಿನಿಂದ ಜಾರಿ
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕಾಯ್ದೆ 2024 ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ಈ ಕಾಯ್ದೆ ಜಾರಿಯಾದ ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಿಘಟನೆಗೊಳ್ಳಲಿದೆ ಎಂದರು.
ಶ್ರೀಚಾಮುಂಡೇಶ್ವರಿ ಕ್ಷೇತ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ವ್ಯಾಪ್ತಿಗೆ ಬರುವ ಪ್ರದೇಶವನ್ನು ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರತುಪಡಿಸಲು ಅಗತ್ಯವಿದ್ದಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಿನ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರ ಅವಗಾಹನೆಗೆ ತರಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.